Advertisement

ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಕೆರೆಗೆ ನೀರು ತುಂಬಿಸಿ

10:11 PM Sep 16, 2019 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬೊಮ್ಮನಹಳ್ಳಿ ಸೇರಿದಂತೆ ಚಾಮರಾಜನಗರ ತಾಲೂಕಿನ ಅರಕಲವಾಡಿ, ಸುವರ್ಣನಗರ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆ ಭಾಗದ ಗ್ರಾಮಗಳ ಮುಖಂಡರು ಮತ್ತು ಗ್ರಾಮಸ್ಥರು ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರನ್ನು ಭೇಟಿ ಮಾಡಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸಿದರು.

Advertisement

ಪಟ್ಟಣದ ಪ್ರವಾಸಿಮಂದಿರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಸಮಿತಿಯ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ನೇತೃತ್ವದ ತಾಲೂಕಿನ ಬೊಮ್ಮನಹಳ್ಳಿ, ಚಾಮರಾಜನಗರ ತಾಲೂಕಿನ ಅರಕಲವಾಡಿ, ಯರಗನಹಳ್ಳಿ, ಹೊನ್ನಹಳ್ಳಿ, ಯಣಗುಂಬ ಹಾಗೂ ಯಾನಗಹಳ್ಳಿ ಗ್ರಾಮಸ್ಥರ ನಿಯೋಗ ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಿದರು.

ತೀವ್ರ ನಿರ್ಲಕ್ಷ್ಯ: ಈ ಹಿಂದೆ ಜಿಲ್ಲೆಯ ಕುಡಿವ ಸಮಸ್ಯೆ ನೀಗಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಆಲಂಬೂರು ಏತನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ನೀರು ತುಂಬಿಸಿದ್ದರು. ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಬೇಕಾಗಿದ್ದರೂ ಸಣ್ಣನೀರಾವರಿ ನಿಗಮದ ಅಧಿಕಾರಿಗಳು ಕಾಮಗಾರಿ ಬಗ್ಗೆ ತೀವ್ರ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದರು.

ವ್ಯರ್ಥವಾಗುತ್ತಿರುವ ನೀರು: ಹುತ್ತೂರಿನಿಂದ ಸುವರ್ಣಾನಗರ, ಅರಕಲವಾಡಿ, ಯರಗನಹಳ್ಳಿ, ಬೊಮ್ಮನಹಳ್ಳಿ, ಹಾಗೂ ವಡ್ಡಗೆರೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಬದ್ದತೆಯ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ. ಇದರಿಂದ ಮಳೆಗಾಲದಲ್ಲಿ ನದಿಯಲ್ಲಿ ಹೆಚ್ಚಿನ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ ಎಂದು ದೂರಿದರು.

ಶಾಸಕರಿಗೆ ಮನವಿ: ಈ ಭಾಗದಲ್ಲಿ ಅಂತರ್ಜಲ ಕೊರತೆ ಎದುರಾಗಿದ್ದು ಜನ ಜಾನುವಾರುಗಳು ಹಾಗೂ ರೈತರು ತೀವ್ರ ತೊಂದರೆ ಎದುರಿಸಬೇಕಾಗಿದೆ. ಇದರ ವಿರುದ್ಧ ಉಗ್ರಹೋರಾಟ ನಡೆಸಲು ನಿರ್ಧರಿಸಲಾಗಿದೆ. ಸದ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಮುಖ್ಯಮಂತ್ರಿಗಳು ಈ ಬಗ್ಗೆ ಆಸಕ್ತಿ ವಹಿಸಿದರೆ ಕಾಮಗಾರಿ ಪೂರ್ಣಗೊಂಡು ಉಪಯೋಗಕ್ಕೆ ಬರಲಿದೆ. ಆದ್ದರಿಂದ ತಾವು ಈ ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಮಟ್ಟದಲ್ಲಿ ಒತ್ತಡತರಬೇಕು ಎಂದು ನಿಯೋಗದ ಮುಖಂಡರು ಶಾಸಕರಿಗೆ ಮನದಟ್ಟು ಮಾಡಿದರು.

Advertisement

ನೀರು ಹರಿಸುವ ಭರವಸೆ: ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಮಾತನಾಡಿ, ಕಳೆದ ವಾರ ತಾವು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಜತೆ ಈ ಬಗ್ಗೆ ಮಾತನಾಡಿದ್ದೇನೆ. ನಿಗದಿತ ಯೋಜನೆಯ ಕಾಮಗಾರಿ ಸದ್ಯದಲ್ಲಿಯೇ ಪ್ರಾರಂಭ ವಾಗಲಿದೆ. ವಡ್ಡಗೆರೆಯಿಂದ ಮುಂದುವರೆದ 11 ಕೆರೆಗಳಿಗೆ ಪೈಪ್‌ ಅಳವಡಿಸುವ ಯೋಜನೆಯನ್ನೂ ಕೈಬಿಟ್ಟಿದ್ದು, ನೈಸರ್ಗಿಕ ಮಾರ್ಗದಲ್ಲಿಯೇ ನೀರು ಹರಿಸಲಾಗುವುದು. ಈ ಬಗ್ಗೆ ಯಾರೂ ಪ್ರತಿಭಟನೆ ಮಾಡುವ ಅವಶ್ಯಕತೆ ಎದುರಾಗುವುದಿಲ್ಲ ಎಂದರು.

ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸುತ್ತೇನೆ. ಶೀಘ್ರ ಕ್ರಮಕ್ಕೆ ಒತ್ತಾಯಿಸುತ್ತೇನೆಂದು ನಿಯೋಗಕ್ಕೆ ಭರವಸೆ ನೀಡಿದರು. ಕುಂದಕೆರೆ ನಾಗಮಲ್ಲಪ್ಪ, ಅರಕಲವಾಡಿ ಪ್ರಭುಸ್ವಾಮಿ, ಲಿಂಗಪ್ಪ, ಯರಗನಹಳ್ಳಿ ರಾಜಶೇಖರ್‌, ಬಸವಣ್ಣ, ಶಂಕರಪ್ಪ, ಯಾನಗಹಳ್ಳಿ ಚನ್ನಬಸಪ್ಪ, ಯಣಗುಂಬ ಕುಮಾರ್‌, ಮಾದಪ್ಪ ಸೇರಿದಂತೆ ರೈತ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next