ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕೈಗೆತ್ತಿಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್.ಅವರು ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು, ಮಂಡಳಿ ವತಿಯಿಂದ ವಿವಿಧ ಇಲಾಖೆಗಳಿಗೆ ನೀಡಿದ ಕಾಮಗಾರಿಗಳ ವಿವರ, ಆರ್ಥಿಕ ಗುರಿ, ಭೌತಿಕ ಗುರಿ ಕುರಿತು ಸಾಧಿಸಿರುವ ಪ್ರಗತಿಯ ಕುರಿತು ಪರಿಶೀಲನೆಯನ್ನು ನಡೆಸಿ ಮಾತನಾಡಿದರು.
2021-22ನೇ ಸಾಲಿಗೆ ಮಂಡಳಿಯಿಂದ ಯಾದಗಿರಿ ಜಿಲ್ಲೆಗೆ ಮಾರ್ಚ್ ಮಾಹೆಗೆ ಒಟ್ಟು 27.87 ಕೋಟಿ ರೂ.ಗಳ ಆರ್ಥಿಕ ಗುರಿ ನಿಗದಿಪಡಿಸಲಾಗಿದ್ದು, ಅದಕ್ಕನುಗುಣವಾಗಿ ಇಲ್ಲಿಯವರೆಗೆ ಒಟ್ಟು 20.39 ಕೋಟಿ ರೂ.ಗಳ ಮೊತ್ತದ ಬಿಲ್‌ಗಳನ್ನು ಮಂಡಳಿಗೆ ಸಲ್ಲಿಸಿದ್ದು, ಅದರಲ್ಲಿ 6.4 ಕೋಟಿ ರೂ.ಗಳ ಮೊತ್ತದ ಬಿಲ್ ಅನುಮೋದನೆಯಾಗಿದೆ. ಇನ್ನೂ 14.35 ಕೋಟಿ ರೂ.ಗಳ ಬಿಲ್‌ಗಳು ಮಂಡಳಿಯಲ್ಲಿ ಬಾಕಿ ಇರುತ್ತದೆ. ಬಾಕಿ ಇರುವ ಮತ್ತು ಅನುಮೋದನೆಯಾದ ಮೊತ್ತ ಸೇರಿ ಶೇ.73 ರಷ್ಟು ಸಾಧನೆಯಾಗಿರುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪ್ರಸ್ತುತ ಮಾಹೆ ಮತ್ತು ವಾರ್ಷಿಕ ಗುರಿಗೆ ತಕ್ಕಂತೆ ಗುರಿ ಸಾಧಿಸಿ ಇನ್ನೂ ಬಾಕಿ ಉಳಿದ ಮೊತ್ತಗಳ ಬಿಲ್‌ಗಳನ್ನು ಕೂಡಲೇ ಸಲ್ಲಿಸಿ ಶೇ.100 ರಷ್ಟು ಸಾಧನೆ ಮಾಡಲು ಜಿಲ್ಲೆಯ ಎಲ್ಲಾ ಅನುಷ್ಠಾನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಕೆಕೆಆರ್‌ಡಿಬಿ ತಾಂತ್ರಿಕ ಸಲಹೆಗಾರ ಸಂಗಮೇಶ ಗುಬ್ಬೇವಾಡ ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.