ಇನ್ನೇನು, ಪರೀಕ್ಷೆಗಳು ಮುಗಿದು ಈ ಶೈಕ್ಷಣಿಕ ವರ್ಷ ಮುಗಿದು ಹೋಗುವುದರಲ್ಲಿದೆ. ನಾವು ಮೂಲತಃ ಪುತ್ತೂರಿನವರು. ನಮ್ಮ ತಂದೆಯೊಂದಿಗೆ ಮಡಿಕೇರಿಯಲ್ಲಿಯೇ ಸೆಟ್ಲ ಆಗಿದ್ದೇವೆ. ಮಂಗಳೂರಿನಲ್ಲಿ ಪಿಯುಸಿ ಓದುತ್ತಿದ್ದಾಗಲಿಂದಲೇ ತಂದೆತಾಯಿಯನ್ನು ತೊರೆದು ಹಾಸ್ಟೆಲ್‌ನಲ್ಲಿ ಇರಬೇಕಾದ ಸ್ಥಿತಿ ಬಂದಿತ್ತು. ಪ್ರತಿವರ್ಷ ಪರೀಕ್ಷೆ ಮುಗಿದು ಮನೆಗೆ ಹೋಗುವಾಗಲೂ ಅದೇನೋ ಸಂಭ್ರಮ. ಇನ್ನು ಎರಡು ತಿಂಗಳು ಕಾಲೇಜಿನ ಗೊಡವೆ ಇಲ್ಲದೆ ಮನೆಯಲ್ಲಿಯೇ ಇರಬಹುದಲ್ಲ – ಎಂದು.
ತಿಂಗಳಿಗೊಮ್ಮೆ ನಾನು ಮನೆಗೆ ಹೋಗುವ ಪರಿಪಾಠ ಇಟ್ಟುಕೊಂಡಿದ್ದೇನೆ. ಮನೆಗೆ ಹೋಗುವಾಗಲೆಲ್ಲ ಅಮ್ಮನಿಗೆ ಖುಷಿಯೋ ಖುಷಿ. ಅವಳು ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನೆಲ್ಲ ಕಟ್ಟಿಕೊಡುತ್ತಿದ್ದಳು. ಒಮ್ಮೆ ಹಬ್ಬದ ದಿನ ಇತ್ತು. ನನಗೆ ಆವತ್ತು ಹೋಗಲಾಗಿರಲಿಲ್ಲ. ಕಾಲೇಜಿನಲ್ಲಿ ಸ್ಫೋರ್ಟ್ಸ್ಡೇ ಇತ್ತು. ಅಪ್ಪ ಮತ್ತು ಅಮ್ಮ ಆ ದಿನ ಹಬ್ಬ ಆಚರಿಸಲಿಲ್ಲ. ಆಮೇಲೆ ತಿಥಿ-ದಿನ ಎಲ್ಲವನ್ನೂ ನೋಡಿ, ಆ ದಿನ ನನಗೂ ಮನೆಗೆ ಬರುವ ಸಮಯವಿದೆಯೇ ಎಂದು ಕೇಳಿ ಅಂದೇ ಹಬ್ಬ ಆಚರಿಸಿದರು.
ಹಬ್ಬದ ಸಂಭ್ರಮಕ್ಕಿಂತಲೂ ಅಂದು ನಾನು ಮನೆಗೆ ಬಂದಿರುವುದೇ ಹಬ್ಬದಂತೆ ಅವರಿಗೆ ಅನ್ನಿಸಿರಬೇಕು. ನಾವು ಹಾಸ್ಟೆಲ್‌ನಲ್ಲಿರುವಾಗ ಬಟ್ಟೆ ಒಗೆದು ಅಭ್ಯಾಸವಾಗಿತ್ತು. ವಾರಕ್ಕೊಮ್ಮೆ ಬಟ್ಟೆಯನ್ನು ರಾಶಿ ಹಾಕಿ ನೆಲ ಮಹಡಿಯಲ್ಲಿದ್ದ ಒಗೆಕಲ್ಲುಗಳಿಗೆ ಬಡಿದು ಬಡಿದು ಬಟ್ಟೆ ಒಗೆಯುತ್ತಿದ್ದೆವು. ಬಟ್ಟೆ ಒಗೆಯುವುದು ಉದಾಸೀನದ ಸಂಗತಿಯಾದರೂ ನಮ್ಮ ಗೆಳೆಯರಿಗೆ ಅದೊಂದು ಮೋಜಿನ ಅನುಭವವಾಗಿರುತ್ತಿತ್ತು. ಆ ಸಂದರ್ಭದಲ್ಲಿ ಬಟ್ಟೆಯನ್ನು ಕಲ್ಲಿಗೆ ಬಡಿಯುವ ಲಯಕ್ಕೆ ಅನುಗುಣವಾಗಿ ಹಿಂದಿ ಮತ್ತು ಕನ್ನಡ ಪದ್ಯಗಳನ್ನು ಹಾಡುತ್ತಿದ್ದೆವು. ಒಬ್ಬ ಹಾಡಿದರೆ ಎಲ್ಲರೂ ಅದಕ್ಕೆ ದನಿಗೂಡಿಸುತ್ತಿದ್ದರು. ಕೆಲವೊಮ್ಮೆ ಸಾಬೂನು ಹಚ್ಚಿದ ಬಟ್ಟೆಯನ್ನು ಜೋರಾಗಿ ಕಲ್ಲಿಗೆ ಬಡಿದು ಅದರ ನೊರೆ ಬೇರೆಯವರ ಮೇಲೆ ವೃಥಾ ಚಿಮ್ಮುವಂತೆ ಮಾಡುತ್ತಿದ್ದೆವು. ಪರೀಕ್ಷೆಯ ಸಮಯದಲ್ಲಿ ಬಟ್ಟೆ ಒಗೆಯಲು ಸಮಯ ಸಾಲುತ್ತಿರಲಿಲ್ಲ. ಹಾಗಾಗಿ, ರಾತ್ರಿ ಬೆಳಿಗ್ಗೆ – ಸಮಯದ ಹೊತ್ತುಗೊತ್ತಿಲ್ಲದೆ ಬಟ್ಟೆಯನ್ನು ಒಯ್ದು ಕಲ್ಲಿಗೆ ಬಡಿದು ಬೇಗ ಬೇಗನೆ ಒಗೆತದ ಕಾರ್ಯ ಮುಗಿಸುತ್ತಿದ್ದೆವು.
ಎಂದಿನ ಅಭ್ಯಾಸದಂತೆ ಮನೆಗೆ ಬಂದಾಗಲೂ ಹಾಕಿದ ಉಡುಪನ್ನು ಕಳಚಿ, ಮನೆಯ ಕ್ಯಾಶುವಲ್ ತೊಡುಗೆಯನ್ನು ತೊಡುತ್ತಿದ್ದೆ. ಮತ್ತು ಕೊಳೆಯಾದ ಬಟ್ಟೆಗಳನ್ನು ಹಿಡಿದುಕೊಂಡು ಬಟ್ಟೆ ಒಗೆಯುವ ಕಲ್ಲಿನತ್ತ ನಡೆದುಬಿಡುತ್ತಿದ್ದೆ. ಆಗ ಅಮ್ಮ , “”ಬೇಡ ನಾನು ಒಗೆಯುತ್ತೇನೆ” ಎಂದು ಹೇಳಿ ನನ್ನ ಕೈಯಲ್ಲಿದ್ದ ಬಟ್ಟೆಯನ್ನು ತಾನೇ ಒಯ್ಯುತ್ತಿದ್ದಳು. ನಾನು ಹೈಸ್ಕೂಲಿನಲ್ಲಿದ್ದಾಗ “”ಬಟ್ಟೆ ಒಗೆಯಲು ಕಲಿತುಕೋ” ಎಂದು ಬೈಯುತ್ತ ನನ್ನನ್ನು ಬಟ್ಟೆಕಲ್ಲಿನತ್ತ ಎಳೆದೊಯ್ದು ನೀರಿನಲ್ಲಿ ಬಟ್ಟೆ ಮುಳುಗಿಸಿ ಒತ್ತಾಯದಿಂದ ಒಗೆಸುತ್ತಿದ್ದಳು. ಆದರೆ, ಈಗ ಯಾಕೆ ಅಮ್ಮ ನನ್ನನ್ನು ಬಟ್ಟೆ ಒಗೆಯಲು ಬಿಡುತ್ತಿಲ್ಲ ಎಂದು ಅಚ್ಚರಿಯಾಯಿತು.
ಈಗ ಅಮ್ಮ ಹಾಡುತ್ತ ಸಂತೋಷದಿಂದ ನನ್ನ ಬಟ್ಟೆಯನ್ನು ಒಗೆದು, ಹಗ್ಗಕ್ಕೆ ಒಣ ಹಾಕುವುದನ್ನು ನಾನು ನೋಡಿದೆ. ನನ್ನ ಬಟ್ಟೆಯನ್ನು ಒಗೆಯುವುದರಲ್ಲಿಯೇ ಆಕೆಗೆ ಏನೋ ಸಂತೋಷವಿದ್ದಂತೆ ತೋರಿತು. ಆಮೇಲೆ, ನನ್ನ ಲಗೇಜಿನ ಬ್ಯಾಗನ್ನು ಒದ್ದೆ ಬಟ್ಟೆಯಿಂದ ಒರೆಸಿ ಅದರ ಮೇಲಿದ್ದ ಧೂಳನ್ನು ತೆಗೆದಳು. ನನ್ನ ಶೂವನ್ನು ಕೂಡಾ ಒರೆಸಿ ಇಟ್ಟಳು.ನಮ್ಮ ನೆರೆಮನೆಯವರು ಹುಬ್ಬಳ್ಳಿಗೆ ಹೋದವರು ಕರದಂಟನ್ನು ತಂದಿದ್ದರು. ಒಂದನ್ನು ಅಮ್ಮನಿಗೆ ಕೊಟ್ಟಿದ್ದರು. ಅದರ ಅರ್ಧ ಭಾಗವನ್ನು ಅಮ್ಮನೂ ಅಪ್ಪನೂ ತಿಂದು ಉಳಿದರ್ಧ ಭಾಗವನ್ನು ನನಗೆ ತೆಗೆದಿಟ್ಟಿದ್ದಳು. “”ಡ್ರೈಫ್ರುಟ್‌ನಿಂದ ಮಾಡಿದ್ದು ಚೆನ್ನಾಗಿದೆ ನೋಡು” ಎಂದು ಸಂಭ್ರಮದಿಂದ ನನಗೆ ಕೊಟ್ಟಳು.
ಈಗ ನಾನು ಅದೇ ಅಮ್ಮನ ಮನೆಗೆ ಹೊರಟಿದ್ದೇನೆ. ನನ್ನ ಸ್ನಾತಕೋತ್ತರ ಪದವಿ ಮುಗಿದುದರಿಂದ ಇನ್ನು ಕಲಿಯುವ ಅವಕಾಶ ಇದೆಯೋ ಇಲ್ಲವೋ ಗೊತ್ತಿಲ್ಲ. ಇಷ್ಟು ವರ್ಷಗಳ ಕಾಲ ಮನೆಯಿಂದ ಹೊರಗಿದ್ದು ಈಗ ಮನೆಯಲ್ಲಿಯೇ ಉಳಿಯಲೇಬೇಕಾದ ಸ್ಥಿತಿ ಬಂದಿದೆ. ಉದ್ಯೋಗ ಸಿಕ್ಕರೆ ಮತ್ತೆ ಹೊರಗೆ ಹೋಗುವ ಸಾಧ್ಯತೆ ಇದ್ದೇ ಇದೆ. ಈಗ ಅಮ್ಮ ನನ್ನನ್ನು ಏನೂ ಕೆಲಸ ಮಾಡಲು ಬಿಡದೆ, ತಾನೇ ಎಲ್ಲವನ್ನೂ ಮಾಡಿಕೊಂಡು ತ್ರಾಸ ತೆಗೆದುಕೊಳ್ಳುವಳ್ಳೋ ಏನೊ ಎಂಬ ಬೇಸರ ಕಾಡುತ್ತಿದೆ.
ಮನೆ, ಹಾಸ್ಟೆಲು, ಕಾಲೇಜು-ಹದಿಹರೆಯದಲ್ಲಿ ಇವೆಲ್ಲವನ್ನು ತೊರೆಯುವುದೂ ಕಷ್ಟ , ಮರಳುವುದೂ ಕಷ್ಟವೇ.
ಮನೆಯಲ್ಲಿರುವಾಗ ಹಾಸ್ಟೆಲ್ ಸುಖವೆನಿಸುತ್ತದೆ. ಹಾಸ್ಟೆಲ್‌ಗೆ ಬಂದ ಕೂಡಲೇ ಮನೆಯನ್ನು ಮನಸ್ಸು ನೆನೆಯುತ್ತದೆ. ಕ್ಲಾಸಿಗೆ ಹೋದಾಗ “ಛೇ ಬರೇ ಬೋರು’ ಎಂಬ ಭಾವನೆ ಬರುತ್ತದೆ. ಕಾಲೇಜು ಮುಕ್ತಾಯದ ಹಂತದಲ್ಲಿರುವಾಗ “ಛೆ! ಇದನ್ನು ಬಿಡಬೇಕಲ್ಲ’ ಎಂಬ ನೋವು ಕಾಡುತ್ತದೆ. ಯಾರಾದರೂ ಹುಡುಗಿಯನ್ನು ಪ್ರೀತಿಸೋಣ ಅನ್ನಿಸುತ್ತದೆ. ಪ್ರೀತಿಸಿದರೆ ಅಮ್ಮ ಬೇಜಾರು ಮಾಡಿಕೊಂಡಾರು ಎಂಬ ಆತಂಕ ಕಾಡುತ್ತದೆ. ಎಲ್ಲ ವರ್ಷಗಳು ಹೀಗೆ ಬೇಕು-ಬೇಡಗಳ ಗೊಂದಲದಲ್ಲಿಯೇ ಕಳೆದುಹೋದವು. ಗೊಂದಲ ಈ ಪ್ರಾಯದಲ್ಲಿ ಇರಬೇಕಾದ್ದೇ, ತಪ್ಪಲ್ಲ ಎಂದು ಯಾರೋ ಹೇಳಿದ್ದು ಕೇಳಿದ್ದೇನೆ.
ಹಾಸ್ಟೆಲ್‌ನ ಕೋಣೆಯಲ್ಲಿ ಎಲ್ಲ ವಸ್ತುಗಳನ್ನು ದೊಡ್ಡ ಪೆಟ್ಟಿಗೆಯೊಳಗೆ ಸೇರಿಸಿ ಹೊರಗೆ ನಡೆಯುತ್ತಿದ್ದೇನೆ. ಒಂದು ಕೈಯಲ್ಲಿ ಪ್ಲಾಸ್ಟಿಕ್ ಬಕೆಟ್ ಮತ್ತು ನೀರು ಮೊಗೆಯುವ ದೊಡ್ಡ ಲೋಟವನ್ನು ಹಿಡಿದುಕೊಂಡಿದ್ದೇನೆ. ಹಾಸಿಗೆ ಚೆನ್ನಾಗಿದ್ದರೆ ಯಾರಿಗಾದರೂ ಬಳಕೆಗೆ ಕೊಟ್ಟು ಬಿಡಿ ಎಂದು ಸೆಕ್ಯುರಿಟಿಗೆ ಹೇಳಿದ್ದೇನೆ. ಇನ್ನೂ ಸಂಪಾದನೆ ಮಾಡದ ನನ್ನಲ್ಲೂ ಒಂದು ಪುಟ್ಟ ಪರ್ಸ್ ಇದೆ. ಅದನ್ನು ಹೊರತೆಗೆದು ನೂರು ರೂಪಾಯಿ ತೆಗೆದು “ಬೇಡ ಬೇಡ’ ಎಂದು ಹೇಳಿದರೂ ಸೆಕ್ಯುರಿಟಿ ರಾಘಣ್ಣನ ಜೇಬಿಗೆ ತುರುಕಿದ್ದೇನೆ. ಖಾಲಿ ಇದ್ದ ನೋಟುಪುಸ್ತಕ, ಪೆನ್ನು ಇತ್ಯಾದಿಗಳನ್ನೆಲ್ಲ ಒಂದು ಡಬ್ಬದಲ್ಲಿ ತುಂಬಿಸಿ ನಿಂಗಮ್ಮನಿಗೆ ಕೊಟ್ಟು ಯಾರಿಗಾದರೂ ಕೊಟ್ಟುಬಿಡಿ ಎಂದು ಹೇಳಿದ್ದೇನೆ. ಇನ್ನು ಈ ಹಾಸ್ಟೆಲ್‌ನೊಳಗೆ ಮರಳಿ ಬರುವ ಸಾಧ್ಯತೆ ಇಲ್ಲ ಎಂದು ನಿಚ್ಚಳವಾಗಿದೆ. ದಾರಿಯ ತುಂಬ ಮೇಫ್ಲವರ್‌ಗಳು ಬಿದ್ದು ಎಲ್ಲವೂ ಕೆಂಪಾಗಿವೆ.
– ಶ್ರೀಕಾಂತ ಎನ್.
ಮಂಗಳೂರು ವಿ. ವಿ.