ವಿಜಯಪುರ: ಅಕ್ಟೋಬರ್ ಅಂತ್ಯದೊಳಗೆ ನಗರದ ಬಸವನಬಾಗೇವಾಡಿ ಮಾರ್ಗದ ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ| ವಿ.ಬಿ. ದಾನಮ್ಮನವರ ಕಾಮಗಾರಿ ಗುತ್ತಿಗೆ ಸಂಸ್ಥೆ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ನಗರದ ಇಬ್ರಾಹಿಂಪುರ ರೈಲ್ವೆ ಗೇಟ್ ಎಲ್‌ಸಿನಂ 81ರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಸ್ಥಳದಲ್ಲಿದ್ದ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಈ ನಿರ್ದೇಶನ ನೀಡಿದರು.
ಇಬ್ರಾಹಿಂಪುರ ರೈಲ್ವೆ ಗೇಟ್ ವಿಜಯಪುರ-ಬೆಂಗಳೂರು ಮಾರ್ಗದ ನಗರದ ಪ್ರಮುಖ ರಸ್ತೆ. ಈ ರಸ್ತೆ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ಸಾರ್ವಜನಿಕ ಸುಗಮ ಸಂಚಾರ ದೃಷ್ಟಿಯಿಂದ ಕಾಮಗಾರಿಗೆ ವೇಗ ನೀಡಿ ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿದರು.
ಇದಲ್ಲದೇ ಸದರಿ ಕಾಮಗಾರಿ ಕೈಗೆತ್ತಿಕೊಂಡ ನಗರದ ಬಸವನಬಾಗೇವಾಡಿ ಮಾರ್ಗದ ಗಣೇಶ ನಗರ, ಗುರುಪಾದೇಶ್ವರ ನಗರ ಸೇರಿದಂತೆ ಈ ಮಾರ್ಗದ ಬಹುತೇಕ ನಗರಗಳು ನಗರದಿಂದ ಸಂಪರ್ಕ ಕಡಿತಗೊಂಡಿವೆ. ಪರಿಣಾಮ ವಾಹನ ಸವಾರರು ಮಾತ್ರವಲ್ಲ ಈ ಪರಿಸರದ ನಿವಾಸಿಗಳು ಸುತ್ತುವರಿದು ನಗರಕ್ಕೆ ಬಂದು-ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ವಿಳಂಬದ ಕುರಿತು ಸಾರ್ವಜನಿಕ ದೂರುಗಳು ಬರುತ್ತಿವೆ ಎಂದು ಗುತ್ತಿಗೆ ಸಂಸ್ಥೆ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ಸದರಿ ಕಾಮಗಾರಿ ಕುರಿತು ಈ ಹಿಂದೆ ನಡೆದ ಸಭೆಯಲ್ಲಿ ಕಾಮಗಾರಿಯಲ್ಲಿ ಸೂಕ್ತ ಬದಲಾವಣೆ ಕುರಿತು ನೀಡಿದ ಸಲಹೆ ಅಳವಡಿಸಿಕೊಂಡು, ಯೋಜನಾ ನಕ್ಷೆ ಪರಿಷ್ಕರಿಸಿಕೊಳ್ಳಲು ಸೂಚಿಸಲಾಗಿತ್ತು. ಅದರಂತೆ ಹಿಂದೆ ಸೂಚಿಸಿದಂತೆ ಕಾಮಗಾರಿ ಪರಿಷ್ಕೃತ ಮಾದರಿಯಲ್ಲೇ ನಡೆಸಬೇಕು. ಯಾವುದೇ ನೆಪಗಳನ್ನು ಹೇಳದೇ ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ಲೋಕೋಪಯೋಗಿ ಬಂದರು, ಒಳನಾಡು ಜಲಸಾರಿಗೆ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ಹಾಗೂ ದಕ್ಷಿಣ ಪಶ್ಚಿಮ ರೈಲ್ವೆಯ ಕಾರ್ಯನಿರ್ವಾಹಕ ಅಭಿಯಂತರರು ಇದ್ದರು.