Advertisement

ಮೇ ಅಂತ್ಯದೊಳಗೆ ಸಿದ್ಧತೆ ಪೂರ್ಣಗೊಳಿಸಿ

07:59 AM May 22, 2020 | Suhan S |

ಧಾರವಾಡ: ಕೋವಿಡ್ ವೈರಸ್‌ ನಿಯಂತ್ರಣ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದ್ದು, ಹೆಚ್ಚು ಸ್ಥಳಾವಕಾಶದ ಅಗತ್ಯತೆ ಇರುತ್ತದೆ. ಹೀಗಾಗಿ ಪ್ರಸಕ್ತ ಮತ್ತೆ ಹೆಚ್ಚು ಮಳೆಯಾದರೆ ಜನರಿಗೆ ವ್ಯವಸ್ಥೆ ಕಲ್ಪಿಸಲು, ಹಾಸ್ಟೆಲ್‌ ಸಮುದಾಯ ಭವನ, ಕಲ್ಯಾಣ ಮಂಟಪಗಳನ್ನು ಈಗಲೇ ಗುರುತಿಸಿ ಪಟ್ಟಿ ಮಾಡಬೇಕು ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾಮಟ್ಟದ ಮಾನ್ಸೂನ್‌ ಪೂರ್ವ ಸಿದ್ಧತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಅನಿರೀಕ್ಷಿತವಾಗಿ ಅಪಾರ ಮಳೆ ಬಂದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಸ್ತೆ, ಸೇತುವೆ ಸೇರಿದಂತೆ ಮೂಲ ಸೌಕರ್ಯಗಳಿಗೂ ಹಾನಿಯಾಗಿತ್ತು. ಪ್ರಸ್ತುತ ಸಾಲಿಗೆ ವಾಡಿಕೆಗಿಂತ ಹೆಚ್ಚು ಮಳೆಯಾದರೆ ಸಮರ್ಥವಾಗಿ ನಿಭಾಯಿಸಲು ಅಗತ್ಯ ಸಿದ್ಧತೆಗಳನ್ನು ಆಯಾ ಇಲಾಖೆ ಅಧಿಕಾರಿಗಳು ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಸೂಚಿಸಿದರು.

ಸಣ್ಣ ನೀರಾವರಿ ಇಲಾಖೆ, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ತಾಲೂಕಾಡಳಿತ ಜಂಟಿಯಾಗಿ ಆಯಾ ತಾಲೂಕಿನಲ್ಲಿ ಅಧಿ ಕ ಮಳೆಯಿಂದ ಕಳೆದ ಸಾಲಿನಲ್ಲಿ ತೊಂದರೆಗೀಡಾದ ಪ್ರದೇಶಗಳನ್ನು ಗುರುತಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮಳೆಯಿಂದಾಗಿ ಹಾನಿ, ಅಪಾಯ ಉಂಟಾದಾಗ ತಕ್ಷಣ ನೆರವಿಗೆ ಬರಲು ಅಗ್ನಿಶಾಮಕದಳ ಮಹಾನಗರ ಪಾಲಿಕೆ ಮತ್ತು ತಹಶೀಲ್ದಾರ್‌ ಕಚೇರಿಗಳಲ್ಲಿ ಸುರಕ್ಷತಾ ಸಾಧನಗಳನ್ನು ಸಿದ್ಧವಾಗಿಡಲು ಜಿಲ್ಲಾಡಳಿತ ಬೋಟ್‌, ಲೈಫ್‌ ಜಾಕೆಟ್‌, ಟಾರ್ಚ್‌, ವುಡ್‌ ಕಟರ್‌ ಸೇರಿದಂತೆ ವಿವಿಧ ಉಪಕರಣಗಳನ್ನು ಪೂರೈಸುತ್ತಿದೆ ಎಂದರು. ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ ಮಾತನಾಡಿ, ಅವಳಿ ನಗರದಲ್ಲಿ ಅಪಾರ ಮಳೆಯಿಂದ ತೊಂದರೆಗೀಡಾಗುವ 15 ಪ್ರದೇಶಗಳನ್ನು ಗುರುತಿಸಲಾಗಿದ್ದು, ನಾಲಾ, ಒಳಚರಂಡಿ ಸ್ವತ್ಛತೆ ಈಗಾಗಲೇ ಆರಂಭಿಸಲಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ಮಲ್ಲಿಕಾರ್ಜುನ ಶಿರಹಟ್ಟಿ ಮಾತನಾಡಿ, ಹುಲಿಕೆರೆಯ ಇಂದಿರಮ್ಮ ಕೆರೆ ಕಾಮಗಾರಿ ಈ ವಾರ ಆರಂಭವಾಗುತ್ತದೆ. ಹೆಚ್ಚುವರಿ ನೀರು ಅಳ್ನಾವರ ಪಟ್ಟಣ ಹಾಗೂ ಇತರ ಜನವಸತಿ ಪ್ರದೇಶಕ್ಕೆ ಬರದಂತೆ ಈಗಾಗಲೇ ಕ್ರಮ ಕೈಗೊಂಡು, ನೀರು ಸರಾಗವಾಗಿ ಹೋಗುವಂತೆ ಮಾಡಲಾಗಿದೆ ಎಂದರು.

Advertisement

ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್‌ ವಿ.ಎನ್‌. ಪಾಟೀಲ್‌, ಪಂಚಾಯತ ರಾಜ್‌ ಇಂಜನಿಯರಿಂಗ್‌ ವಿಭಾಗದ ಕಾರ್ಯಪಾಲಕ ಇಂಜಿನೀಯರ್‌ ಮನೋಹರ  ಮಂಡೊಲಿ, ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್‌ ದೇವರಾಜ್‌ ಶಿಗ್ಗಾಂವಿ, ಅಗ್ನಿಶಾಮಕ ದಳದ ಅಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ|ಪರಮೇಶ್ವರ ನಾಯಕ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ., ಹೆಸ್ಕಾಂ ಅಧಿಕಾರಿಗಳು, ಮಲಪ್ರಭಾ ಕಾಲುವೆ ಅಧಿಕಾರಿಗಳು, ತಹಶೀಲ್ದಾರ್‌ ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿ ಕಾರಿಗಳು ಮಾತನಾಡಿ, ತಮ್ಮ ಇಲಾಖೆಗಳಲ್ಲಿ ಕೈಗೊಂಡ ಪೂರ್ವ ಸಿದ್ಧತೆಗಳನ್ನು ವಿವರಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಡಿಸಿಪಿ ಬಸರಗಿ, ಡಿವೈಎಸ್‌ಪಿ ರವಿ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅಳ್ನಾವರದ ಹುಲಿಕೆರೆ, ನುಗ್ಗಿಕೇರಿ, ಕೆಲಗೇರಿ, ಉಣಕಲ್‌, ರಾಮಾಪೂರ, ಹಿರೇಹೊನ್ನಳ್ಳಿ ಕೆರೆಗಳಿಂದ ಅಪಾರ ಪ್ರಮಾಣದ ನೀರು ಬಂದು ಜನವಸತಿ ಪ್ರದೇಶಗಳಿಗೆ ಹಾನಿ ಉಂಟಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಸುತ್ತಲಿನ ಪ್ರದೇಶಗಳಲ್ಲಿ ಕಾಲುವೆ, ಒಳಚರಂಡಿ, ನಾಲಾಗಳನ್ನು ಸ್ವತ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಿಕೊಳ್ಳಬೇಕು. ಜಿಲ್ಲೆಯ ಎಲ್ಲಾ 168 ನಗರ ಮತ್ತು ಗ್ರಾಮೀಣ ಪ್ರದೇಶದ ಕೆರೆಗಳಿಂದ ಹೆಚ್ಚುವರಿ ನೀರು ಹರಿದು ಹೋಗಲು ಗೇಟ್‌ ಸುಸ್ಥಿತಿಯಲ್ಲಿರಬೇಕು. ಅವುಗಳ ವಿಸ್ತಾರದ ಕುರಿತು ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗಬೇಕು.  –ಡಾ| ಬಿ.ಸಿ.ಸತೀಶ, ಸಿಇಒ, ಜಿಪಂ ಧಾರವಾಡ

ಕೆರೆಗಳ ಒತ್ತುವರಿ ತೆರವು ಮಾಡಲು ಭೂದಾಖಲೆಗಳ ಇಲಾಖೆಯಿಂದ ಸರ್ವೇಯರ್‌ಗಳ ನೆರವು ಪಡೆಯಬೇಕು. ಕುಂದಗೋಳ ಮತ್ತು ನವಲಗುಂದ ತಾಲೂಕುಗಳಲ್ಲಿ ಕಳೆದ ಬಾರಿ ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳದಿಂದ ಉಂಟಾದ ಪ್ರವಾಹ ಪರಿಸ್ಥಿತಿ ಅವಲೋಕಿಸಿ ಈ ಬಾರಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. –ದೀಪಾ ಚೋಳನ್‌, ಡಿಸಿ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next