Advertisement

ನನೆಗುದಿಗೆ ಬಿದ್ದ ಕಾಮಗಾರಿ ತ್ವರಿತಕ್ಕೆ ತಾಕೀತು

08:01 PM Aug 29, 2020 | Suhan S |

ಯಾದಗಿರಿ: 2017-18ನೇ ಸಾಲಿನವರೆಗಿನ ಕೆಕೆಆರ್‌ಡಿಬಿ ಯೋಜನೆಯಡಿ ಕೈಗೆತ್ತಿಕೊಂಡು ಪ್ರಾರಂಭಿಸಿದ ಮತ್ತು ಪ್ರಾರಂಭಿಸದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಯಾ ಏಜೆನ್ಸಿ, ಇಲಾಖೆಗಳು ಹೆಚ್ಚಿನ ಗಮನಹರಿಸಬೇಕು. ಪ್ರಸಕ್ತ ವರ್ಷದ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌. ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಕೆಆರ್‌ಡಿಬಿ ಮೈಕ್ರೋ-ಮ್ಯಾಕ್ರೋ ಹಾಗೂ ಸಿಎಂಒಕ್ಯೂ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ನಿರ್ವಹಣೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಡಿ ನಡೆಯುತ್ತಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂದರು.

ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುವಂತೆ ಸೂಚಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪದವಿ ಕಾಲೇಜುಗಳ ಗ್ರಂಥಾಲಯಗಳಿಗೆ ವಿಷಯಾಧಾರಿತ ಪುಸ್ತಕಗಳನ್ನು ಪೂರೈಸಲು ಕೆಕೆಆರ್‌ಡಿಬಿ ಅನುದಾನದಡಿ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಿಪಂ ಮುಖ್ಯ ಯೋಜನಾಧಿಕಾರಿ ಸುನೀಲ ಬಿಸ್ವಾಸ್‌, ಕೆಕೆಆರ್‌ಡಿಬಿ ಯಾದಗಿರಿ ಕೋಶದ ತಾಂತ್ರಿಕ ಸಲಹೆಗಾರ ಸಂಗಮೇಶ ಗುಬ್ಬೇವಾಡ, ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಭಗವಂತ ಅನವಾರ, ನಗರಸಭೆ ಪೌರಾಯುಕ್ತರು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next