ಕುಷ್ಟಗಿ: ಕೃಷ್ಣಾ ಬಿ ಸ್ಕೀಂ ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ವಿಳಂಬ ಧೋರಣೆ ಸಲ್ಲದು. ರಾಜ್ಯ-ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಶೀಘ್ರ ಯೋಜನೆ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ಮಂಗಳವಾರದಿಂದ ತಹಶೀಲ್ದಾರ್ ಕಚೇರಿ ಎದುರು ಕರ್ನಾಟಕ ರೈತ ಸಂಘ (ಪ್ರೊ| ಎಂ.ಡಿ. ನಂಜುಂಡಸ್ವಾಮಿ ಬಣ) ಕೃಷ್ಣಾ ಬಿ ಸ್ಕೀಂ ಕೊಪ್ಪಳ ಏತ ನೀರಾವರಿ ಯೋಜನೆ ಮೂರನೇ ಹಂತದ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಅವರು ಮಾತನಾಡಿದರು.
ಕಾಮಗಾರಿ ನಿಲ್ಲಿಸದಿರಿ: ಯೋಜನೆಗೆ 2013ರಲ್ಲಿಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಡಿಗಲ್ಲು ಹಾಕಿರುವ ಯೋಜನೆಯ ವಿಳಂಬದ ಬಗ್ಗೆ ಪ್ರಶ್ನಿಸಿ, ಈ ವಿಷಯದಲ್ಲಿ ಸ್ಥಳೀಯ ಶಾಸಕ ತದ್ವಿರುದ್ಧ ಹೇಳಿಕೆ ನೀಡುವುದು ಖಂಡನೀಯ. ಕೈಗೆತ್ತಿಕೊಳ್ಳುವ 3ನೇ ಹಂತದ ಯೋಜನೆ ಪೂರ್ಣಗೊಳ್ಳುವವರೆಗೂ ನಿಲ್ಲಿಸಲೇಬಾರದು. ಆಲಮಟ್ಟಿ ಅಣೆಕಟ್ಟೆ ಎತ್ತರಿಸಿ, ಇಲ್ಲವೇ ಕೈ ಬಿಡಲಿ. ಇದಕ್ಕೆ ಸಂಬಂಧವೇ ಇಲ್ಲ. ಕೃಷ್ಣಾ ಬಿ ಸ್ಕೀಂ ಯೋಜನೆಯನ್ವಯ ಈ ಭಾಗಕ್ಕೆ ಎಷ್ಟು ನೀರು ಹಂಚಿಕೆಯಾಗಬೇಕು ಅದಕ್ಕೆ ಆದ್ಯತೆ ನೀಡಬೇಕು. ಈ ಮೂರು ದಿನಗಳಲ್ಲಿ ರಾಜ್ಯ ಸರ್ಕರ ಸ್ಪಂದಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತಿದ್ದು, ಏನಾದರೂ ಅನಾಹುತಗಳಾದರೆ ಅದಕ್ಕೆ ಅಧಿಕಾರಿಗಳು- ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಆರ್.ಕೆ. ದೇಸಾಯಿ ಮಾತನಾಡಿ, ಕೃಷ್ಣಾ ಬಿ ಸ್ಕೀಂ ಅನ್ವಯ ನೀರು ಹಂಚಿಕೆ ನಮ್ಮ ಹಕ್ಕು. ಈ ಭಾಗದಲ್ಲಿ ಮಳೆಗಾಲ ಅಸರ್ಪಕವಾಗಿದ್ದು, ಬಹುತೇಕ ಜನ ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ಈ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು. ನಂತರ ಪ್ರತಿಭಟನಾಕಾರರು ತಹಶೀಲ್ದಾರ್ ಎಂ. ಸಿದ್ದೇಶ ಅವರಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಸಿದ್ಧೇಶ ಮನವಿ ಸ್ವೀಕರಿಸಿ ಮಾತನಾಡಿ, ಶಾಸಕ ಅಮರೇಗೌಡರ ಗಮನಕ್ಕೆ ತರುವುದಾಗಿ ತಿಳಿಸಿದರು.
ಬೆಂಬಲ: ನನೆಗುದಿಯಲ್ಲಿರುವ ಕೃಷ್ಣಾ ಬಿ ಸ್ಕೀಂ ಕೊಪ್ಪಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಮಹಾದಾಯಿ ಹೋರಾಟ ಸಮಿತಿ ಸೇರಿದಂತೆ ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ, ಕರ್ನಾಟಕ ರೈತ ಸಂಘದ ಮಾಜಿ ಅಧ್ಯಕ್ಷ ಕೆ.ಟಿ. ಗಂಗಾಧರಯ್ಯ, ಪ್ರಧಾನ ಕಾರ್ಯದರ್ಶಿ ಟಿ. ಪುಟ್ಟಯ್ಯ, ಅಶೋಕ ಬಸೆಟ್ಟಿ, ಮಹಾದಾಯಿ ಹೋರಾಟ ಸಮಿತಿಯ ವಿಜಯ ಕುಲಕರ್ಣಿ ಮೊದಲಾದವರು ಸಾತ್ ನೀಡಿದರು.
ರೈತ ಸಂಘದ ರಾಜ್ಯ ಘಟಕದ ಅಣ್ಣಪ್ಪಗೌಡ ದೇಸಾಯಿ, ಮಹಿಳಾ ಘಟಕದ ಮಲ್ಲಮ್ಮ ಹೆಬಸೂರು ಶಲವಡಿ, ಸುವರ್ಣ, ಶ್ಯಾಮಸ್ಸಾದ್ ಬೇಗಂ, ಎಚ್. ಮೀನಾಕ್ಷಿ, ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಕೋನಾಪುರ, ತಾಲೂಕು ಅಧ್ಯಕ್ಷ ನಿಂಗಪ್ಪ ಬೆಳವಣಕಿ, ಬಸವರಾಜ ಹಂಪಣ್ಣವರ, ಬಸವರಾಜ ರೇವಡಿ ಇತರರಿದ್ದರು.