Advertisement

ಕಾಲಮಿತಿಯೊಳಗೆ ವಸತಿ ಯೋಜನೆ ಪೂರ್ಣಗೊಳಿಸಿ

09:13 PM Feb 26, 2020 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ವಸತಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಠಾರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.

Advertisement

ಮೊದಲಿಗೆ ವಸತಿ ಯೋಜನೆಗಳ ಪ್ರಗತಿ ಪರಿಶೀಲಿಸಿದ ಉಸ್ತುವಾರಿ ಕಾರ್ಯದರ್ಶಿ ಅವರು, ಜಿಲ್ಲೆಯಲ್ಲಿ ಜಾರಿಯಲ್ಲಿರುವ ವಸತಿ ಯೋಜನೆಗಳ ನೋಂದಣಿ ಹಾಗೂ ಸ್ಥಳ ಪರಿವೀಕ್ಷಣೆಯನ್ನು ಮೊಬೈಲ್‌ ಆ್ಯಪ್‌ ಮೂಲಕ ಮಾಡಲಾಗುತ್ತಿದೆ. ಇದನ್ನು ನಿಯೋಜಿತ ಅಧಿಕಾರಿಗಳು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ವ್ಯವಸ್ಥಿತ ಯೋಜನೆ ರೂಪಿಸಿ: ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಮಾತನಾಡಿ, ವಸತಿ ಯೋಜನೆಗಳ ನೋಂದಣಿ ಹಾಗೂ ಸ್ಥಳ ಪರಿಶೀಲನೆ ಕಾರ್ಯವನ್ನು ವ್ಯವಸ್ಥಿತ ಯೋಜನೆ ರೂಪಿಸಿ ಕೈಗೊಳ್ಳಬೇಕು. ಇದರಿಂದ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಲಿವೆ ಎಂದರು.

ಖರ್ಚು-ವೆಚ್ಚದ ಮಾಹಿತಿ ಕಡ್ಡಾಯ: ವಿವಿಧ ಇಲಾಖೆಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಯೋಜನೆಯಡಿ ನೀಡಲಾಗುವ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿ ಅನುಕೂಲ ಕಲ್ಪಿಸಬೇಕು. ಜತೆಗೆ ಇಲಾಖೆಗಳು ಅನುದಾನದ ಖರ್ಚು-ವೆಚ್ಚಗಳ ಮಾಹಿತಿಯನ್ನು ಪ್ರತಿ ಮಾಹೆ ಕಡ್ಡಾಯವಾಗಿ ನೀಡುವಂತೆ ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.

ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಿ: ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆ ಬಗೆಗೆ ಮಾಹಿತಿ ಪಡೆದ ಕಾರ್ಯದರ್ಶಿಗಳು, ಮುಂದಿನ 3 ತಿಂಗಳು ಜಿಲ್ಲೆಯ ಯಾವ ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಬೇಕು. ಅಲ್ಲಿನ ಭೌಗೋಳಿಕ ಅಗತ್ಯತೆಗೆ ತಕ್ಕಂತೆ ನೀರನ್ನು ಪೂರೈಸಬೇಕು. ಜತೆಗೆ ವ್ಯರ್ಥವಾಗುವ ನೀರನ್ನು ಮರುಬಳಕೆ ಮಾಡುವ ವಿಧಾನಗಳ ಬಗ್ಗೆ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

Advertisement

ಜಿಲ್ಲೆಯಲ್ಲಿ ಆಯುಷ್ಮಾನ್‌ ಕಾರ್ಡ್‌ ವಿತರಣಾ ಕಾರ್ಯ ಮತ್ತಷ್ಟು ತ್ವರಿತಗತಿಯಲ್ಲಿ ಆಗಬೇಕು. ಗ್ರಾಮ ಮಟ್ಟದಿಂದ ವಿತರಣಾ ಕಾರ್ಯಗಳು ನಡೆಯಬೇಕು. ಪ್ರತಿಯೊಬ್ಬರೂ ಯೋಜನೆಯ ಪ್ರಯೋಜನ ಪಡೆಯುವಂತಾಗಬೇಕು ಎಂದು ತಿಳಿಸಿದರು.

ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಿ: ಜಿಲ್ಲೆಯಲ್ಲಿ ಬುಡಕಟ್ಟು ನೆಲೆಗಳು ಹೆಚ್ಚಿರುವುದರಿಂದ, ಅಧಿಕಾರಿಗಳು ಕಾಡಂಚಿನ ಗ್ರಾಮಗಳು ಹಾಗೂ ಬುಡಕಟ್ಟು ಹಾಡಿಗಳಿಗೆ ಭೇಟಿ ನೀಡಿ, ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಬೇಕು. ಯಾವ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗಾಗಿಯೇ ತೆರೆಯಲಾಗಿರುವ ವಸತಿ ನಿಲಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಇದೇ ವೇಳೆ ಇ-ಆಫೀಸ್‌ ವ್ಯವಸ್ಥೆ, ಬೆಳೆ ಸಮೀಕ್ಷೆ, ಸಕಾಲ ಯೋಜನೆಯ ಪ್ರಗತಿ, ಕಾಡ್ಗಿಚ್ಚು ತಡೆಗೆ ಕೈಗೊಳ್ಳಲಾಗಿರುವ ಕ್ರಮಗಳು ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲಿಸಲಾಯಿತು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಅನಿತಾ ಹದ್ದಣ್ಣನವರ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿಖೀತಾ ಚಿನ್ನಸ್ವಾಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿರುವ ಎಲ್ಲಾ ಕೆಲಸಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಈ ಮೂಲಕ ಜಿಲ್ಲೆಯ ಸಕಾರಾತ್ಮಕ ಬೆಳವಣಿಗೆಯಲ್ಲಿ ಎಲ್ಲರೂ ಶ್ರಮಿಸಬೇಕು.
-ಡಾ.ಎಂ.ಆರ್‌. ರವಿ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next