ಬಾಗಲಕೋಟೆ: ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ ಅಡಿಯಲ್ಲಿ ಬರುವ ಎಲ್ಲ ರೈತರ ನೋಂದಣಿ ಪ್ರಕ್ರಿಯೆ ಜೂನ್ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಮಾರ್ಗದರ್ಶನ ನೀಡಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜರುಗಿದ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಡಾಟಾ ಎಂಟ್ರಿ ಆಪರೇಟರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಯ ವ್ಯಾಪ್ತಿಯಲ್ಲಿ ಒಟ್ಟು 2,50,009 ರೈತರು ಬರುತ್ತಿದ್ದು, ಈಗಾಗಲೇ 66 ಸಾವಿರ ರೈತರಿಂದ ನೋಂದಣಿಯಾಗಿದೆ. ಜೂನ್ ತಿಂಗಳ ಅಂತ್ಯಕ್ಕೆ ಉಳಿದ ರೈತರ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದರು.
ಪಿಎಂ-ಕಿಸಾನ್ ಯೋಜನೆ ಅನುಷ್ಠಾನ ಕುರಿತು ಮಾರ್ಗದರ್ಶನ ನೀಡುವುದರ ಜೊತೆಗೆ ಕೆಲ ಸಂದೇಶಗಳ ಬಗ್ಗೆಯೂ ಚರ್ಚಿಸಿದರು. ರೈತರ ಅರ್ಜಿಗಳನ್ನು ಪಂಚಾಯತ ತಂತ್ರಾಂಶದ ಆನ್‌ಲೈನ್‌ನಲ್ಲಿ ನಮೂದಿಸುವ ಕಾರ್ಯ ತ್ವರಿತಗತಿಯಾಗಿ ಪ್ರಾರಂಭಿಸಬೇಕು. ಡಾಟಾ ಎಂಟ್ರಿ ಆಪರೇಟರ್‌ಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು ಈ ಯೋಜನೆಯಡಿ ಭೂ ಒಡೆತನ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ ರೂ.6 ಸಾವಿರಗಳನ್ನು ನಾಲ್ಕು ತಿಂಗಳಿಗೊಮ್ಮೆ 3 ಸಮಾನ ಕಂತುಗಳಲ್ಲಿ ನೀಡಲಾಗುತ್ತಿದ್ದು, ನೋಂದಣಿಗೆ ಪಹಣಿ ಪತ್ರ ಅವಶ್ಯವಿಲ್ಲ. ಅರ್ಜಿ ನಮೂನೆಯಲ್ಲಿಯೇ ಜಮೀನಿನ ಸರ್ವೇ ನಂಬರ ಹಾಗೂ ವಿಸ್ತೀರ್ಣದ ಬಗ್ಗೆ ನಮೂದಿಸಿದರೆ ಸಾಕು. ಭರ್ತಿ ಮಾಡಿ ನಮೂನೆ ಜೊತೆಗೆ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಬ್ಯಾಂಕ್ ಐಎಫ್‌ಎಸ್‌ಸಿ ಕೋಡ್‌ನೊಂದಿಗೆ ಗ್ರಾಮ ಪಂಚಾಯತ್‌ಗಳಲ್ಲಿ ಮಾಹಿತಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ವಿಜಾಪುರ, ಉಪನಿರ್ದೇಶಕ ಕೊಂಗವಾಡ ಉಪಸ್ಥಿತರಿದ್ದರು.