ಬೀದರ: ಔರಾದ ಹಾಗೂ ಕಮಲನಗರ ತಾಲೂಕುಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾಕಷ್ಟು ಅನುದಾನ ಮಂಜೂರು ಮಾಡಿಸಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎಲ್ಲ ಅಭಿವೃದ್ಧಿ ಕೆಲಸಗಳನ್ನು ನಿಗದಿತ ಅವ ಧಿಯಲ್ಲಿ ಪೂರ್ಣಗೊಳಿಸಬೇಕೆಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಔರಾದ ಹಾಗೂ ಕಮಲನಗರ ತಾಲೂಕಿನ ಭಂಡಾರ ಕುಮಟಾ, ಡೊಂಗರಗಾಂವ, ಮಾಳೆಗಾಂವ್ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಗ್ರಾಮ ಸಂಚಾರ ನಡೆಸಿದ ಸಚಿವರು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಮಾತನಾಡಿದರು.
ಗ್ರಾಮಗಳಲ್ಲಿ ಪಿಡಿಒಗಳು, ಕೃಷಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಜೆಸ್ಕಾಂ ಸಿಬ್ಬಂದಿ ಅವರು ಹೇಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಸ್ಥಳೀಯರ ಮೂಲಕ ತಿಳಿದುಕೊಂಡರು. ಈ ವೇಳೆ ಗ್ರಾಮಸ್ಥರು ಕುಡಿಯುವ ನೀರು, ವಿದ್ಯುತ್ ಪೂರೈಕೆ, ಪಡಿತರ ಸಮಸ್ಯೆ ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಸಚಿವರೊಂದಿಗೆ ಹಂಚಿಕೊಂಡರು. ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಔರಾದ ಕ್ಷೇತ್ರ ಸಂಪೂರ್ಣ ಅಭಿವೃದ್ಧಿಯಾಗಬೇಕು. ಜನತೆಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂಬ ಉದ್ದೇಶದಿಂದ ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆ, ರಸ್ತೆ ಮತ್ತು ಸೇತುವೆಗಳ ನಿರ್ಮಾಣ, ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ನಿರ್ಮಾಣ ಹೀಗೆ ಸಾಕಷ್ಟು ರೀತಿಯ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯಾವುದೇ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಾರದ ರೀತಿಯಲ್ಲಿ ಕೆಲಸ ಮಾಡಬೇಕೆಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಅಧಿಕಾರಿಗಳು ಹುರುಪಿನಿಂದ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಬೇಕು. ಜನರ ಮೊಬೈಲ್ ಕರೆಗಳನ್ನು ತಿರಸ್ಕರಿಸುವುದು, ಸಾರ್ವಜನಿಕರ ಮೇಲೆ ರೇಗಾಡುವುದು, ವಿನಾ ಕಾರಣ ವಿಳಂಬ ಮಾಡುವುದು ಕಂಡು ಬಂದಲ್ಲಿ ಅಂಥ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಸಚಿವರು ಎಚ್ಚರಿಸಿದರು.
ಶಾಲೆ ಕಾಮಗಾರಿ ಪರಿಶೀಲನೆ: ಬೆಳಕುಣಿ(ಬಿಎಚ್) ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯುತ್ತಿರುವ ಶಾಲಾ ಕಟ್ಟಡ ಕಾಮಗಾರಿ ಸ್ಥಳಕ್ಕೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು.
ತಾಪಂ ಇಒ ಸೈಯ್ಯದ್ ಫಜಲ್ ಮಹಮೂದ್, ಎಇಇ ಗಳಾದ ವೀರಶೆಟ್ಟಿ ರಾಠೊಡ, ಸುಭಾಷ ದಾಳಗುಂಡೆ, ರವಿ ಕಾರಬಾರಿ, ಅಧಿಕಾರಿಗಳಾದ ಎಚ್. ಎಸ್ ನಗನೂರ, ಡಾ| ಸೋಮಶೇಖರ, ಭೀಮರಾವ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಸುರೇಶ ಭೋಸ್ಲೆ, ಗಿರೀಶ ಒಡೆಯರ್, ಶಿವರಾಜ ಅಲ್ಮಾಜೆ, ಶೇಷರಾವ ಕೋಳಿ ಇದ್ದರು.