Advertisement

ನಿರಂತರ ನೀರು ಸರಬರಾಜು ಯೋಜನೆ ಶೀಘ್ರ ಪೂರ್ಣಗೊಳಿಸಿ

03:25 PM Jul 20, 2017 | |

ವಿಜಯಪುರ: ವಿಜಯಪುರ ನಗರಕ್ಕೆ ಅಮೃತ ಯೋಜನೆಯಡಿ ಜಾರಿಯಲ್ಲಿರುವ 24*7 ಕುಡಿಯುವ ನೀರಿನ ಕಾಮಗಾರಿ ತೀವ್ರವಾಗಿ
ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಸಚಿವ ರೋಶನ್‌ ಬೇಗ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರಾಭಿವೃದ್ಧಿ, ಮಹಾನಗರ ಪಾಲಿಕೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು
ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ವಿಜಯಪುರ ನಗರದಲ್ಲಿ ಈ ಯೋಜನೆಯಲ್ಲಿ 157.56 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಮಹತ್ವದ ಯೋಜನೆಗೆ ಚಾಲನೆ ನೀಡಲಾಗಿದೆ. 3 ವರ್ಷ ಕಾಲಮಿತಿಯ ಯೋಜನೆಯಲ್ಲಿ 21 ಹಾಗೂ ಗ್ರಾಮೀಣ-1 ಝೋನ್‌ಗಳಲ್ಲಿ ನಿರಂತರ ನೀರು ಸರಬರಾಜು ವ್ಯವಸ್ಥೆ ಜಾರಿಯಲ್ಲಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ವಿಜಯಪುರ ನಗರದ ಜನತೆಯ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ನೀಗಲಿದೆ. ಹೀಗಾಗಿ ಅಧಿಕಾರಿಗಳು ಕಾಮಗಾರಿ ತ್ವರಿತಗೊಳಿಸಬೇಕು ಎಂದು ತಾಕೀತು ಮಾಡಿದರು. 

ವಿಜಯಪುರ ನಗರಕ್ಕೆ ನೀರು ಸರಬರಾಜಿಗಾಗಿ 21.98 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗಿದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ನಗರದ ಬಾಕಿಯಿರುವ 2 ಜೋನ್‌ಗಳಲ್ಲಿ ನಿರಂತರ ನೀರು ಸರಬರಾಜು, ಜಲ ಸಂಗ್ರಹಗಾರ, ಕೊಳವೆ ಮಾರ್ಗ ಅಳವಡಿಕೆ ಹಾಗೂ ಸರ್ವೇ ಕಾಮಗಾರಿಗಳನ್ನು ಮುಂಬರುವ ದಿನಗಳಲ್ಲಿ ವ್ಯವಸ್ಥಿತವಾಗಿ ಕೈಗೊಳ್ಳಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ನೀರಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಜನರಿಗೆ ಸಾಮಾನ್ಯ ಅಗತ್ಯ ಎನಿಸಿರುವ ಕುಡಿಯುವ ನೀರು ಪೂರೈಕೆಗೆ ಅಧಿಕಾರಿಗಳು ಪ್ರಥಮ ಆದ್ಯತೆ ನೀಡಬೇಕು. ಅದರಂತೆ ಒಳಚರಂಡಿ ವ್ಯವಸ್ಥೆ ಸುಧಾರಣೆಗೂ ಮುಂದಾಗಬೇಕು. ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಇರುವ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು.  ಕೇಂದ್ರ ಸರ್ಕಾರದ ನಗರ ವಸತಿ ರಹಿತ ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ದೊರಕಿಸುವ ಮೂಲಕ ಅವರಿಗೆ ಅನುಕೂಲ ಮಾಡಿಕೊಡಬೇಕು. ಈ ಕುರಿತಂತೆ ಸಾಮೂಹಿಕ ವಸತಿ ನಿರ್ಮಾಣಕ್ಕೆ ಮತ್ತು ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ಸ್ವತ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕಾಗಿ ಜನರಲ್ಲಿ ಮನಪರಿವರ್ತನೆಗೆ ಅಧಿಕಾರಿಗಳು ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು
ಸೂಚಿಸಿದರು.

Advertisement

2016-17ನೇ ಸಾಲಿನಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು. 2017-18ನೇ ಸಾಲಿನಲ್ಲಿ
ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿ ನಿಗದಿತ ಅವ ಧಿಯೊಳಗೆ ಕಾಮಗಾರಿಗಳನ್ನು
ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸಭೆಗೆ ಮಾಹಿತಿ ನೀಡಿ, ನಿರಂತರ ನೀರು ಸರಬರಾಜು ಯೋಜನೆಯಡಿ 56 ಕಿ.ಮೀ.
ವರೆಗಿನ ಕಾಮಗಾರಿ ಪೂರ್ಣಗೊಂಡಿದ್ದು, ಮುಂಬರುವ ಅಕ್ಟೋಬರ್‌ ತಿಂಗಳವರೆಗೆ 260 ಕಿ.ಮೀ.ವರೆಗಿನ ಪೈಪ್‌ಲೈನ್‌ ಕಾಮಗಾರಿ
ಪೂರ್ಣಗೊಳ್ಳಲಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ಶೇ. 80ರಷ್ಟು ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು
ಹೇಳಿದರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next