ಚಾಮರಾಜನಗರ: ನಗರದ ಚಾಮರಾಜೇಶ್ವರ ದೇವಾಲಯದ ನೂತನ ರಥದ ಕಾಮಗಾರಿಯನ್ನು 20 ತಿಂಗಳಲ್ಲಿ ಮುಗಿಸಿಕೊಡುವಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸೂಚನೆ ನೀಡಿದರು. ನೂತನ ರಥ ನಿರ್ಮಾಣ ಸಂಬಂಧ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಕರೆಯಲಾಗಿದ್ದ ಕೋಮುವಾರು ಯಜಮಾನರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು.
ರಥಕ್ಕೆ ಕಿಡಿಗೇಡಿ ಬೆಂಕಿ ಹಚ್ಚಿದ ಪರಿಣಾಮ ಕಳೆದ ಮೂರು ವರ್ಷಗಳಿಂದ ಪ್ರಸಿದ್ಧ ಆಷಾಢ ಮಾಸದ ಚಾಮರಾಜೇಶ್ವರ ನಿಂತು ಹೋಗಿದೆ, ಇದು ಶುಭ ಸೂಚಕವಾಗಿಲ್ಲ, ನೂತನ ರಥ ನಿರ್ಮಾಣಕ್ಕೆ ಅನುದಾನವೂ ಬಿಡುಗಡೆಯಾಗಿದೆ.
ರಥ ನಿರ್ಮಾಣಕ್ಕೆ ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳನ್ನು ಜಿಲ್ಲಾಡಳಿತಕ್ಕೆ ಮನವಿ ನೀಡಿ ಪ್ರತಿಭಟನೆ ಮಾಡಿದ್ದರು. ಸಂಬಂಧಪಟ್ಟವರು ನಿರ್ಲಕ್ಷ್ಯ ತೋರಿದ್ದರಿಂದಾಗಿ ರಥ ನಿರ್ಮಾಣವಾಗದೇ ಪ್ರಸಿದ್ಧ ರಥೋತ್ಸವ ನಿಂತು ಹೋಗಿದೆ, ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮುಖಂಡರು ಮನವಿ ಮಾಡಿದರು.
ಶೀಘ್ರ ರಥ ನಿರ್ಮಾಣ: ಬಿ.ಬಿ.ಕಾವೇರಿ ಮಾತನಾಡಿ, ನೂತನ ರಥ ನಿರ್ಮಾಣ ಸಂಬಂಧ ಚರ್ಚಿಸುವುದಕ್ಕಾಗಿಯೇ ಈ ಸಭೆ ಆಯೋಜಿಸಲಾಗಿದೆ. ರಥ ನಿರ್ಮಾಣ ಗುತ್ತಿಗೆದಾರ ಶಿವಕುಮಾರ್‌ಬಡಿಗಾರ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ಆದಷ್ಟು ಬೇಗ ರಥ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಗುತ್ತಿಗೆದಾರ ಶಿವಕುಮಾರ್‌ಬಡಿಗಾರ್ ಜೊತೆ ಈ ಬಗ್ಗೆ ಚರ್ಚೆ ನಡೆಸಿ, 20 ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಿದರು.
20 ತಿಂಗಳಲ್ಲಿ ಕಾಮಗಾರಿ ಪೂರ್ಣ: ಗುತ್ತಿಗೆದಾರ ಶಿವಕುಮಾರ್‌ಬಡಿಗಾರ್ ಮಾತನಾಡಿ, ಚಾಮರಾಜೇಶ್ವರ ನೂತನ ರಥದ ನಿರ್ಮಾಣದ ಗುತ್ತಿಗೆ ಪಡೆದಿದ್ದೇನೆ. ಸುಂದರ ರಥದ ನಿರ್ಮಾಣಕ್ಕೆ ಕನಿಷ್ಠ 20 ತಿಂಗಳು ಬೇಕು, ಮರ ಒಣಗಬೇಕು. ಸಂಬಂಧಪಟ್ಟವರು ತಕ್ಷಣ ಕಾರ್ಯಪ್ರವೃತ್ತರಾಗಿ ರಥಕ್ಕೆ ಬೇಕಾಗುವ ಮರಗಳನ್ನು ಪೂರೈಸಿಕೊಟ್ಟರೆ 20 ತಿಂಗಳಲ್ಲಿ ರಥದ ಕಾಮಗಾರಿ ಮುಗಿಸಿಕೊಡುವುದಾಗಿ ತಿಳಿಸಿದರು.
ಹಣಕಾಸಿನ ತೊಂದರೆ ಇಲ್ಲ: ಸಭೆಯಲ್ಲಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಅನುದಾನ ಬಿಡುಗಡೆಯಾಗಿರುವುದರಿಂದ ಹಣಕಾಸಿನ ತೊಂದರೆ ಇಲ್ಲ, ತಕ್ಷಣ ಕಾರ್ಯಪ್ರವೃತ್ತರಾಗಿ ನೂತನ ರಥ ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ಕಾರ್ಯಗಳನ್ನು ಕೈಗೊಳ್ಳಿ ಎಂದು ಸೂಚನೆ ನೀಡಿ, ತಡಮಾಡದೇ 20 ತಿಂಗಳಲ್ಲಿ ರಥದ ನಿರ್ಮಾಣ ಪೂರ್ಣಗೊಳಿಸಿ ಎಂದು ಸೂಚಿಸಿದರು.
ಭರವಸೆ: ಕೋಮುವಾರು ಯಜಮಾನರು ಹಾಗೂ ಮುಖಂಡರಿಗೆ ಇನ್ನು ಮುಂದೆ ನೂತನ ರಥ ನಿರ್ಮಾಣ ಕಾರ್ಯವನ್ನು ವಿಳಂಬ ಮಾಡುವುದಿಲ್ಲ. 20 ತಿಂಗಳಲ್ಲಿ ರಥ ನಿರ್ಮಾಣ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಕೋಮುವಾರು ಯಜಮಾನರು, ನಾಡದೇಶಗೌಡರಾದ ಲೋಕನಾಥ್ ಮಖಂಡರಾದ ಮುಖಂಡರಾದ ಗಣೇಶ್ ದೀಕ್ಷಿತ್, ಸುದರ್ಶನಗೌಡ, ಮಂಜುನಾಥಗೌಡ, ಚಾ.ರಂ.ಶ್ರೀನಿವಾಸಗೌಡ, ಮಾಧು, ಮಹದೇವಶೆಟ್ಟಿ, ಸುರೇಶನಾಯಕ, ಚಿನ್ನಸ್ವಾಮಿ, ನಂಜುಂಡಶೆಟ್ಟರು, ಪುರುಷೋತ್ತಮ, ಸುರೇಶ್‌ವಾಜಪೇಯಿ,ಶಿವಣ್ಣ, ಚಿನ್ನಮ್ಮ, ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್, ತಹಶೀಲ್ದಾರ್ ಮಹೇಶ್ ಮತ್ತಿತರರು ಇದ್ದರು.