ಆಲಮಟ್ಟಿ: ರೈತರ ಜಮೀನಿಗೆ ನೀರುಣಿಸುವ ವಿತರಣಾ ಕಾಲುವೆಗೆ ಸರಾಗವಾಗಿ ನೀರು ಹರಿಯಬೇಕು ಹಾಗೂ ಆಲಮಟ್ಟಿ ಎಡದಂಡೆ ಕಾಲುವೆ ವ್ಯಾಪ್ತಿಯ ವಿತರಣಾ ಕಾಲುವೆ ಸಂಖ್ಯೆ-2ರ ನವೀಕರಣ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ರೈತರು ಕೆಬಿಜೆನ್ನೆಲ್ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಆಲಮಟ್ಟಿ ಎಡದಂಡೆ ಶಾಖಾ ಕಾಲುವೆ ವ್ಯಾಪ್ತಿಯಲ್ಲಿ ಬರುವ ವಿತರಣಾ ಕಾಲುವೆ ಸಂಖ್ಯೆ-2ನ್ನು ನವೀಕರಣಗೊಳಿಸಲು 3-4 ವರ್ಷಗಳ ಹಿಂದೆಯೇ ಟೆಂಡರ್ ಕರೆಯಲಾಗಿದ್ದರೂ ಇನ್ನೂವರೆಗೆ ಕಾಮಗಾರಿಯನ್ನು ಆರಂಭಿಸಿಲ್ಲ. ವಿತರಣಾ ಕಾಲುವೆ 2ರ ವ್ಯಾಪ್ತಿಯಲ್ಲಿ ನಿಡಗುಂದಿ, ವಡವಡಗಿ ಹಾಗೂ ಯಲ್ಲಮ್ಮನ ಬೂದಿಹಾಳ ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳ ಜಮೀನುಗಳು ನೀರಾವರಿಗೊಳಪಟ್ಟಿವೆ. ವಿತರಣಾ ಕಾಲುವೆಯು ಎಲ್ಲೆಂದರಲ್ಲಿ ಒಡೆದು ಹೋಗಿದ್ದರಿಂದ ಕಾಲುವೆ ಮುಂಭಾಗದಲ್ಲಿರುವ ರೈತರ ಜಮೀನಿಗೆ ನೀರು ಸೋರಿಕೆಯಾಗಿ ಬೆಳೆ ಹಾನಿಯಾಗುವಂತಾಗಿದ್ದರೆ, ಕಾಲುವೆಯ ಕೊನೆಯಂಚಿನ ರೈತರ ಜಮೀನಿಗೆ ನೀರು ಬರದಿರುವುದರಿಂದ ಬಿತ್ತನೆ ಮಾಡಿದ ಬೆಳೆಗಳು ಕಳೆದ ಕೆಲ ವರ್ಷಗಳಿಂದ ಹಾಳಾಗುತ್ತಿವೆ. ಹೀಗೆ ಕೆಲವರಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಹರಿದು ಜಮೀನುಗಳು ಹಾಳಾದರೆ ಇನ್ನು ಕೆಲ ರೈತರ ಜಮೀನಿಗೆ ನೀರಿಲ್ಲದೇ ಹಾಳಾಗುವಂತಾಗಿದೆ.
ಆಲಮಟ್ಟಿ ಎಡದಂಡೆ ಶಾಖಾ ಕಾಲುವೆಯ ವಿತರಣಾ ಕಾಲುವೆ 2ರ ಬಳಿ ಮುಖ್ಯ ಕಾಲುವೆಯಲ್ಲಿ ಅಡ್ಡಲಾಗಿ ಗೋಡೆ ನಿರ್ಮಿಸಿದ್ದರಿಂದ ವಿತರಣಾ ಕಾಲುವೆ ಸಂಖ್ಯೆ-4.8, ವಿತರಣಾ ಕಾಲುವೆ ಸಂಖ್ಯೆ-1 ಹಾಗೂ 2ರಲ್ಲಿ ನೀರು ಸರಾಗವಾಗಿ ಹರಿಯುತ್ತಿತ್ತು. ಕಳೆದ ಕೆಲ ದಿನಗಳ ಹಿಂದೆ ಅಡ್ಡಲಾಗಿ ಕಟ್ಟಿದ್ದ ಗೋಡೆಯನ್ನು ಕೆಡವಿ ಹಾಕಿದ್ದರಿಂದ ಸರಾಗವಾಗಿ ಕಾಲುವೆಗಳಲ್ಲಿ ನೀರು ಹರಿಯದೇ ಮುಖ್ಯ ಕಾಲುವೆಯ ಮೂಲಕ ಹರಿಯುತ್ತದೆ. ಇದರಿಂದ ಮೂರು ವಿತರಣಾ ಕಾಲುವೆಗಳ ವ್ಯಾಪ್ತಿಯ ರೈತರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮುಂಗಾರು ಹಂಗಾಮಿಗೆ ಕಾಲುವೆಗಳಿಗೆ ನೀರು ಹರಿಸುವುದಕ್ಕಿಂತ ಮುಂಚಿತವಾಗಿ 2ನೇ ವಿತರಣಾ ಕಾಲುವೆ ನವೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಖ್ಯ ಕಾಲುವೆಗೆ ನೀರು ಹರಿಸಿದ ವೇಳೆಯಲ್ಲಿ 2ನೇ ಕಾಲುವೆ ವ್ಯಾಪ್ತಿಯ ರೈತರ ಜಮೀನಿಗೆ ನೀರು ಹರಿಯುವಂತಾಗಬೇಕು. ಮೂರು ವಿತರಣಾ ಕಾಲುವೆಗಳಿಗೆ ಸರಾಗವಾಗಿ ನೀರು ಹರಿಯಲು ಮೊದಲಿನಂತೆ ಮುಖ್ಯ ಕಾಲುವೆಯಲ್ಲಿ ಅಡ್ಡಗೋಡೆ ನಿರ್ಮಿಸಬೇಕು ಎಂದು ರೈತರು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಅಭಿಯಂತರ ಎಚ್.ಸುರೇಶ, ನವೀಕರಣ ಮಾಡುವ ಬಗ್ಗೆ ಈಗಾಗಲೇ ಗುತ್ತಿಗೆದಾರರು ಟೆಂಡರ್ ಪಡೆದಿದ್ದಾರೆ. ರೈತರ ಜಮೀನಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಣೆಕಟ್ಟು ವೃತ್ತ ಅಧೀಕ್ಷಕ ಅಭಿಯಂತರ ಡಿ.ಬಸವರಾಜ ಹಾಗೂ ರೈತರಾದ ಪ್ರಭು ಪಟ್ಟಣಶೆಟ್ಟಿ, ಆರ್.ಎಸ್. ಉಕ್ಕಲಿ, ಎಸ್.ಎಂ.ಜಲ್ಲಿ, ಬಿ.ಆರ್.ಸರಶೆಟ್ಟಿ, ಎಂ.ಬಿ.ದಂಡೀನ, ತಿರುಪತಿ ಬಂಡಿ, ವಿಠuಲ ಬಂಡಿವಡ್ಡರ, ಚಂದ್ರಶೇಖರ ವಡ್ಡರ, ಬಿ.ಎಚ್.ಹೊಸಗೌಡರ, ಶಿವಾನಂದ ಸಜ್ಜನ ಮೊದಲಾದವರಿದ್ದರು.