ಅಂಕೋಲಾ: ಮಂಜಗುಣಿ-ಗಂಗಾವಳಿ ನಡುವಿನ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದ ಸಂದರ್ಭದಲ್ಲಿ ಗುತ್ತಿಗೆದಾರರು 6 ತಿಂಗಳಲ್ಲಿ ಸೇತುವೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದರು. ಆದರೆ 4 ವರ್ಷ ಕಳೆದರೂ ಸೇತುವೆ ಮುಗಿದಿಲ್ಲ. ಇದರಿಂದ ಸಂಚಾರ ಕೂಡ ವಿಳಂಬವಾಗಲಿದೆ. ಈ ಕುರಿತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಭೆ ನಡೆಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನೆಬೈಲ್ ಗ್ರಾಪಂ ವತಿಯಿಂದ ಮಂಜಗುಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭೆಯಲ್ಲಿ ಈ ಆಕ್ರೋಶ ವ್ಯಕ್ತವಾಯಿತು.
ಗ್ರಾಪಂ ಅಧ್ಯಕ್ಷ ಮಹಾದೇವ ಗುನಗಾ ಮಾತನಾಡಿ, ಕೆಆರ್‌ಡಿಸಿಎಲ್‌ನಿಂದ ನಮಗೆ ಸೇತುವೆ ಸಂಪರ್ಕ ಕಲ್ಪಿಸಲು ತಾತ್ಕಾಲಿಕವಾಗಿ ರಸ್ತೆ ಸ್ಥಗಿತಗೊಳಿಸುವಂತೆ ತಿಳಿಸಿದ್ದರು. ಇದನ್ನು ಸಭೆಯಲ್ಲಿ ಇಟ್ಟು ಸಾರ್ವಜನಿಕರ ಅಭಿಪ್ರಾಯ ದಾಖಲಿಸಿ ಮೇಲಾಧಿಕಾರಿಗಳಿಗೆ ಕಳಿಸಲಾಗುವುದು ಎಂದರು.
ಸ್ಥಳೀಯರಾದ ಶ್ರೀಪಾದ ನಾಯ್ಕ ಮಾತನಾಡಿ, ನಮಗೆ ಸಂಚರಿಸಲು ಪ್ರತ್ಯೇಕ ರಸ್ತೆ ನಿರ್ಮಿಸಿ ನಂತರ ಸೇತುವೆಗೆ ರಸ್ತೆ ನಿರ್ಮಿಸಬೇಕು. ಎಲ್ಲ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಥಳೀಯರ ಸಮಸ್ಯೆಗಳನ್ನು ಅರಿಯಬೇಕು ಎಂದರು.
ಸ್ಥಳೀಯರಾದ ಈಶ್ವರ ನಾಯ್ಕ ಮಾತನಾಡಿ, ಆದಷ್ಟು ಶೀಘ್ರ ಕಾಮಗಾರಿ ಮುಗಿಯಬೇಕು. ಅಲ್ಲಿಯವರೆಗೆ ಜನರ ಅನುಕೂಲಕ್ಕಾಗಿ ಸೇತುವೆ ಮೇಲೆ ಸಂಚರಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ಕೆಲವೊಮ್ಮೆ ಅಭಿವೃದ್ಧಿ ವಿಷಯ ಬಂದಾಗ ಜನರು ಕೂಡ ಸಹಕರಿಸಬೇಕು ಎಂದರು.
ಸ್ಥಳೀಯರಾದ ನಾಗರಾಜ ನಾಯ್ಕ ಮಾತನಾಡಿ, ಈಗಾಗಲೇ ಸೇತುವೆ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣನ್ನು ಸಂಪೂರ್ಣ ಖುಲ್ಲಾ ಪಡಿಸಬೇಕು. ಇಲ್ಲದಿದ್ದರೆ ಪ್ರತಿ ಮಳೆಗಾಲದಲ್ಲಿ ನೆರೆ ಸಮಸ್ಯೆ ಉಂಟಾಗುತ್ತದೆ. ಹಾಗೇ ಸಾರ್ವಜನಿಕರ ಸಂಚಾರಕ್ಕಾಗಿ ಮೊದಲೇ ಪ್ರತ್ಯೇಕ ರಸ್ತೆ ನಿರ್ಮಿಸಿಕೊಟ್ಟರೆ ಜನರಿಗೆ ಅನುಕೂಲವಾಗಲಿದೆ ಎಂದರು.
ಸ್ಥಳೀಯರಾದ ಗಣೇಶ ನಾಯ್ಕ, ಗಜಾನನ ನಾಯ್ಕ, ಪ್ರಶಾಂತ ನಾಯ್ಕ, ಸತೀಶ ನಾಯ್ಕ, ಶ್ರೀಕಾಂತ ಹರಿಕಂತ್ರ, ಬೊಮ್ಮಯ್ಯ ನಾಯ್ಕ, ಸಂತೋಷ ನಾಯ್ಕ ಸೇರಿದಂತೆ ಹಲವರು ಸಲಹೆ ಸೂಚನೆ ನೀಡಿದರು. ಗ್ರಾಪಂ ಉಪಾಧ್ಯಕ್ಷ ಬೇಬಿ ತಾಂಡೇಲ, ಸದಸ್ಯರಾದ ವೆಂಕಟ್ರಮಣ ನಾಯ್ಕ, ಮಂಜುನಾಥ ನಾಯ್ಕ, ನಾಗವೇಣಿ ಆಗೇರ, ಕಾರ್ಯದರ್ಶಿ ಗಣಪತಿ ನಾಯ್ಕ ಉಪಸ್ಥಿತರಿದ್ದರು. ಪಿಡಿಓ ಸಭೆಯ ಉದ್ದೇಶ ವಿವರಿಸಿದರು.