ತುಮಕೂರು: ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ಕುಮಾರ್ ಅವರು ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂ ಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ಯಲ್ಲಿ 56 ಗ್ರಾಪಂನ 130 ಹಾಗೂ ನಿರ್ಮಿತಿ ಕೇಂದ್ರದ 26 ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಕಾಮಗಾರಿ ಪೂರ್ಣ ಗೊಳಿಸ ಬೇಕೆಂದು ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದರು.
ಪೌಷ್ಟಿಕ ಕೈ ತೋಟ ನಿರ್ಮಿಸಿ: ಕಾಪೌಂಡ್ ಹೊಂದಿರುವ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಕೈತೋಟವನ್ನು ನಿರ್ಮಿಸುವಂತೆ ತೋಟ ಗಾರಿಕಾ ಇಲಾಖೆಯವರಿಗೆ ಸೂಚಿಸಿ ದರಲ್ಲದೇ ಕೊರೊನಾ ಲಾಕ್‌ಡೌನ್ ಹಿನ್ನೆಲೆ ಯಲ್ಲಿ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ರುವ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಮನೆಗೆ ಆಹಾರ ಪದಾರ್ಥಗಳನ್ನು ನಿಗದಿತ ಸಮಯಕ್ಕೆ ವಿತರಣೆ ಮಾಡುವಂತೆ ಶಿಶೂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಅಂಗನವಾಡಿ ಕೇಂದ್ರಗಳಿಗೆ ಗ್ರಾಪಂ, ತಾಪಂ ಅನುದಾನದಲ್ಲಿ ಕಾಪೌಂಡ್ ಮತ್ತು ನೀರಿನ ಸೌಲಭ್ಯ ಹಾಗೂ ಅಗತ್ಯವಿರುವ ಮೂಲಭೂತ ಸೌಲಭ್ಯವನ್ನು ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ದೂರು ನೀಡಿ: ವರದಕ್ಷಿಣೆ ನಿಷೇಧ ಕಾಯ್ದೆ ಯಡಿ ದಾಖಲಾಗುವ ಪ್ರಕರಣಗಳಲ್ಲಿ ಮಹಿಳೆಯ ಮೇಲೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರೆ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಠಾಣೆಗೆ ದೂರು ನೀಡಿ, ಕೌಟುಂಬಿಕ ಕಲಹದಂತಹ ಪ್ರಕರಣಗಳಲ್ಲಿ ದೂರುದಾರರನ್ನು ಕರೆಸಿ ಸಮಾಲೋಚನೆ ನಡೆಸಿ ಇತ್ಯರ್ಥಗೊಳಿಸ ಬೇಕೆಂದು ಸೂಚಿಸಿದರು.
292 ಪ್ರಕರಣಗಳು ಬಾಕಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಮಾತನಾಡಿ, ಸಾಂತ್ವನ ಯೋಜನೆಯಡಿ ಕೌಟುಂಬಿಕ ಕಲಹದಲ್ಲಿ 1049 ಪ್ರಕರಣಗಳು ದಾಖಲಾಗಿದ್ದು, 757 ಪ್ರಕರಣಗಳು ಇತ್ಯರ್ಥಗೊಂಡಿವೆ. ಇನ್ನೂ 292 ಪ್ರಕರಣಗಳ ವಿಚಾರಣೆ ಬಾಕಿ ಇರುತ್ತವೆ ಎಂದು ಸಭೆಗೆ ಮಾಹಿತಿ ನೀಡಿದರು. ಸಖೀ ಒನ್ ಸ್ಟಾಪ್ ಸೆಂಟರ್ ಯೋಜನೆ ಯಡಿ ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ಸಮಾಲೋಚನೆ, ವೈದ್ಯಕೀಯ, ಕಾನೂನು ಸಲಹೆ, ಪೊಲೀಸ್ ನೆರವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಸ್ಥೈರ್ಯನಿಧಿ ಯೋಜನೆ ಯಡಿ ಅತ್ಯಾಚಾರ, ದೌರ್ಜನ್ಯ ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತುರ್ತು ವೈದ್ಯಕೀಯ ಪರಿಹಾರವಾಗಿ 25 ಸಾವಿರ ರೂ. ನೀಡಲಾಗುತ್ತಿದೆ. ವಿಧವಾಕೋಶಕ್ಕೆ ಸಂಬಂಧ ಪಟ್ಟಂತೆ ಸರ್ವೆ ಮಾಡಿಲಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ 63,640 ವಿಧವೆಯರು ಇರುವ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರ ಗಮನಕ್ಕೆ ತಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಶಿಶು ಕಲ್ಯಾಣ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ 1049 ಕೌಟುಂಬಿಕ ಕಲಹದ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 757 ಪ್ರಕರಣಳು ಸಾಂತ್ವನ ಯೋಜನೆ ಯಡಿ ಇತ್ಯರ್ಥಗೊಂಡಿದ್ದು, 292 ಪ್ರಕರಣಗಳು ಬಾಕಿ ಉಳಿದಿವೆ. ಜಿಲ್ಲೆಯಲ್ಲಿ ಸ್ಥೈರ್ಯನಿಧಿ ಯೋಜನೆ ಯಡಿ ಅತ್ಯಾಚಾರ, ದೌರ್ಜನ್ಯ ಹಾಗೂ ಇತರೆ ಪ್ರಕರಣಗಳಲ್ಲಿ ತುರ್ತು ವೈದ್ಯಕೀಯ ಪರಿಹಾರವಾಗಿ 25 ಸಾವಿರ ರೂ. ನೀಡಲಾಗುತ್ತಿದೆ. ವಿಧವಾಕೋಶಕ್ಕೆ ಸಂಬಂಧಪಟ್ಟಂತೆ ಸರ್ವೆ ಮಾಡಿಲಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ 63640 ವಿಧವೆಯರು ಇರುವ ಬಗ್ಗೆ ಮಾಹಿತಿ ಪಡೆಯಲಾಗಿದೆ.
-ಎಸ್.ನಟರಾಜ್, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ