ಕಲಬುರಗಿ: ನ.1ರ ಕರ್ನಾಟಕ ರಾಜ್ಯೋತ್ಸವ ದಿನದಂದು ಕಲಬುರಗಿ ವಿಮಾನ ನಿಲ್ದಾಣದ ಉದ್ಘಾಟನೆಗಾಗಿ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುವ ಉದ್ದೇಶ ಹೊಂದಿದ್ದು, ಶೀಘ್ರವೇ ವಿಮಾನ ನಿಲ್ದಾಣದ ಎಲ್ಲ ಮೂಲ ಸೌಕರ್ಯಗಳು ಹಾಗೂ ಪ್ರಗತಿಯಲ್ಲಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಬೇಕೆಂದು ಲೋಕಸಭಾ ಸದಸ್ಯ ಡಾ| ಉಮೇಶ ಜಾಧವ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಕಲಬುರಗಿ ವಿಮಾನ ನಿಲ್ದಾಣ ಕುರಿತಂತೆ ಭೂಸ್ವಾ ಧೀನ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟ ದೆಹಲಿ ಹಂತದಲ್ಲಿ ವಿಳಂಬವಿರುವ ಅಲ್ಲಿನ ಕೆಲಸಗಳನ್ನು ನಾನು ಫಾಲೋಅಪ್ ಮಾಡುತ್ತೇನೆ ಎಂದರು.
ವಿಮಾನ ನಿಲ್ದಾಣದ ಸುತ್ತಮುತ್ತ ನಿರ್ಮಿಸಿದ ಕಾಂಪೌಂಡ್ ಗೋಡೆಯನ್ನು ಪರಿಶೀಲಿಸಿ ದುರಸ್ತಿ ಹಂತದಲ್ಲಿದ್ದರೆ ದುರಸ್ತಿಗೊಳಿಸಿ. ಯಾವುದೇ ಪ್ರಾಣಿಗಳು ಒಳಗಡೆ ಪ್ರವೇಶಿಸದಂತೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅಧ್ಯಕ್ಷತೆ ವಹಿಸಿ, ವಿಮಾನ ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಕುರಿತು ಮಾಹಿತಿ ಪಡೆದು, ಅ.15ರೊಳಗಾಗಿ ವಿಮಾನ ನಿಲ್ದಾಣದ ಬಾಕಿ ಉಳಿದಿರುವ ಫುಟ್ಟಪಾತ್, ಶೌಚಾಲಯ, ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಹಾಗೂ ಸೇಡಂ ರಸ್ತೆಯಿಂದ ವಿಮಾನ ನಿಲ್ದಾಣವರೆಗೆ ಬೀದಿ ದೀಪಗಳ ಅಳವಡಿಸುವ ಕೆಲಸಗಳು ಪೂರ್ಣಗೊಳಿಸಬೇಕೆಂದು ಸೂಚಿಸಿದರು. ವಿಮಾನ ನಿಲ್ದಾಣಕ್ಕೆ ಕಲ್ಪಿಸಿರುವ ನೀರಿನ ಪೈಪ್‌ಲೈನ್ ವ್ಯವಸ್ಥೆ ಇದುವರೆಗೆ 4 ಕಿ.ಮೀ. ವರೆಗೆ ಪೂರ್ಣಗೊಂಡಿದ್ದು, ಇನ್ನುಳಿದ 6 ಕಿ.ಮೀ. ವರೆಗಿನ ಪೈಪ್‌ಲೈನ್ ಕಾಮಗಾರಿಯನ್ನು ಅ.10ರೊಳಗೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಅಗ್ನಿಶಾಮಕ ದಳ, ಪರಿಸರ ನಿಯಂತ್ರಣ ಮಂಡಳಿ ಹಾಗೂ ಜೆಸ್ಕಾಂ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ನೀಡುವಲ್ಲಿ ತುರ್ತಾಗಿ ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಬಿ. ಶರತ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ನಗರ ಪೊಲೀಸ್ ಆಯುಕ್ತಾಲಯದಡಿಸಿಪಿ ಬಿ. ಕಿಶೋರಬಾಬು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.