ಮಂಗಳೂರು: ಕೋವಿಡ್ -19 ಸೋಂಕು ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಾಯಲು ಸಂಪೂರ್ಣ ಬಂದ್ ಅನಿವಾರ್ಯವಾಗಿದ್ದು, ಶನಿವಾರದಂತೆ ರವಿವಾರವೂ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ಆಗಿರಲಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಮಾಹಿತಿಗಳನ್ನು ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರವೂ ಸಂಪೂರ್ಣ ಬಂದ್ ಮುಂದುವರಿಯಲಿದ್ದು, ಹಾಲು ವಿತರಣೆಗೆ ಸಂಪೂರ್ಣ ರಿಯಾಯಿತಿ ಇದೆ. ಮನೆ ಮನೆಗೂ ವಿತರಕರು ಹಾಲು ಹಾಕುತ್ತಾರೆ. ಮನೆಯಿಂದ ಯಾರೂ ಹೊರ ಬರುವಂತಿಲ್ಲ. ಔಷಧಾಲಯ ಎಂದಿನಂತೆ ತೆರೆಯಲಿದೆ. ಔಷಧ ಖರೀದಿಗೆ ನಿಗದಿತ ಕಾರಣ ಇದ್ರೆ ಮಾತ್ರ ಅನುಮತಿಯಿದೆ. ಸಿಲಿಂಡರ್ ಪೂರೈಕೆ, ಪೆಟ್ರೋಲ್ ಬಂಕ್ ಗಳು ತೆರೆದಿರಲಿದೆ. ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ತೊಂದರೆಯಿಲ್ಲ ಎಂದರು.
ಲಾಕ್ ಡೌನ್ ನಿಂದ ಸಂಕಷ್ಟ ಅನುಭವಿಸುತ್ತಿರುವ ಕಾರ್ಮಿಕರಿಗೆ, ನಿರ್ಗತಿಕರಿಗೆ ಶಾಲೆ/ ಹಾಸ್ಟೆಲ್ ನಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಎಲ್ಲಾದರೂ ಜನ ಸಂಕಷ್ಟದಲ್ಲಿದ್ದರೆ 1077 ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಿ ಎಂದು ಸಚಿವರು ಹೇಳಿದರು.
ಜಿಲ್ಲೆಯ ವರ್ತಕರ ಸಭೆ ಕರೆಯಲಾಗಿದೆ. ದಿನಸಿ ವಸ್ತುಗಳನ್ನು ಡೋರ್ ಡೆಲಿವರಿ ಮಾಡುವ ಚಿಂತನೆ ಮಾಡಿದ್ದೇವೆ. ಆ್ಯಪ್ ಮೂಲಕ ದಿನಸಿ ಸಾಮಾಗ್ರಿ ಡೋರ್ ಡೆಲಿವರಿ ಮಾಡುವ ಯೋಜನೆಯ ಬಗ್ಗೆಯೂ ಸಚಿವರು ಮಾಹಿತಿ ನೀಡಿದರು.