Advertisement

ಜೆಜೆಎಂ ಕಾಮಗಾರಿ ಸಕಾಲಕ್ಕೆ ಪೂರ್ಣಗೊಳಿಸಿ

01:08 PM May 26, 2022 | Team Udayavani |

ಬೆಳಗಾವಿ: ಗ್ರಾಮೀಣ ಪ್ರದೇಶದ ಜನರ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಜಲಜೀವನ ಮಿಷನ್‌ ಯೋಜನೆಯಡಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಂತ-1 ಹಾಗೂ ಹಂತ-2 ರ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನಂತರ ಮೂರನೇ ಹಂತದ ಯೋಜನೆ ಸಮರ್ಪಕವಾಗಿ ಸಕಾಲದಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್‌. ಕೆ.ಅತೀಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲಜೀವನ ಮಿಷನ್‌ ಯೋಜನೆಯ ಹಂತ- 1 ಕಾಮಗಾರಿಗಳ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಆದ್ದರಿಂದ ಪ್ರಗತಿಯಲ್ಲಿ ಇರುವ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ಹಂತ-2ರಲ್ಲಿ ಕೈಗೊಳ್ಳುವ ಯೋಜನೆಗಳ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಯಾವುದೇ ಯೋಜನೆಯಲ್ಲಿ ನ್ಯೂನ್ಯತೆ ಇರದಂತೆ ಎಚ್ಚರಿಕೆ ವಹಿಸಿ ಡಿಸೆಂಬರ್‌ ಅಂತ್ಯದವರೆಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಚಿಕ್ಕೋಡಿ ವಿಭಾಗದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಬಣಗಾರ ಮಾತನಾಡಿ, ಚಿಕ್ಕೋಡಿ ವಿಭಾಗದ 666 ಕಾಮಗಾರಿಗಳ ಪೈಕಿ 652 ಕಾಮಗಾರಿಗಳನ್ನು ಜೂನ್‌ 15ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ನೀರು ಸಂರಕ್ಷಣಾ ಯೋಜನೆ: ಕುಡಿಯುವ ನೀರಿನ ಅಭಾವ ಎದುರಾಗಿರುವ ತಾಲೂಕುಗಳ ಕುರಿತು ಮಾಹಿತಿ ಪಡೆದುಕೊಂಡ ಎಲ್‌ ಕೆ ಅತೀಕ ಅವರು, ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದರೆ ಖಾಸಗಿ ಕೊಳವೆ ಬಾವಿ ಅಥವಾ ಟ್ಯಾಂಕರ್‌ ಬಾಡಿಗೆ ಪಡೆಯಬಹುದು. ಕುಡಿಯುವ ನೀರಿನ ಅಭಾವ ಕಂಡುಬಂದರೆ ಲಭ್ಯವಿರುವ ಅನುದಾನ ಬಳಸಿಕೊಂಡು ಕೂಡಲೇ ನೀರು ಒದಗಿಸಬೇಕು ಎಂದು ಹೇಳಿದರು.

ನಿರಂತರವಾಗಿ ಹತ್ತು ವರ್ಷಗಳಿಂದ ನೀರಿನ ಅಭಾವ ಇರುವ ಗ್ರಾಮಗಳಲ್ಲಿ ಮುಂದಿನ ಐದಾರು ವರ್ಷಗಳ ಕಾಲ ನರೇಗಾ ಯೋಜನೆಯಡಿ ನೀರು ಸಂರಕ್ಷಣಾ ಯೋಜನೆ ಜಾರಿಗೊಳಿಸಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿಸಬಹುದು ಎಂದು ಸಲಹೆ ನೀಡಿದರು.

Advertisement

ಶಾಲೆಗಳಲ್ಲಿ ಮೂಲಸೌಕರ್ಯ: ಶಾಲಾ ದಾಖಲಾತಿ, ಕಟ್ಟಡಗಳ ದುರಸ್ತಿ, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳ ವಿತರಣೆ ಬಗ್ಗೆ ಪ್ರಸ್ತಾಪಿಸಿದ ಅವರು ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಮೈದಾನ ನಿರ್ಮಿಸಬೇಕು ಎಂದು ಯುವಜನ ಸೇವೆ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂಬಂಧಿಸಿದ ಇಲಾಖೆಯ ಜತೆಗೆ ಸಮನ್ವಯ ಮಾಡಿಕೊಂಡು ಸ್ಥಳಗಳನ್ನು ಗುರುತಿಸಿ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದರು.

ಲಸಿಕಾ ಅಭಿಯಾನ: 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಪ್ರತಿಯೊಂದು ಗ್ರಾಮಗಳಲ್ಲಿ ಜಾಗೃತಿ ಶಿಬಿರಗಳನ್ನು ನಡೆಸಬೇಕು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳ ನೆರವಿನಿಂದ ಮನೆ ಮನೆಗೆ ತೆರಳಿ ಲಸಿಕೆ ಹಾಕಲು ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ವಾಹನದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಪೊಲಿಯೋ ಸೇರಿದಂತೆ ಉಳಿದ ಲಸಿಕಾಕರಣ ಕಾರ್ಯಕ್ರಮಗಳನ್ನು ನಿಗದಿತ ವೇಳಾಪಟ್ಟಿಯ ಪ್ರಕಾರ ನಡೆಸಬೇಕು. ಅದೇ ರೀತಿ ಪ್ರೌಢಾವಸ್ಥೆಯ ಶಾಲಾ ವಿದ್ಯಾರ್ಥಿನಿಯರಿಗೆ ಅನಿಮಿಯಾ ನಿಯಂತ್ರಣಕ್ಕೆ ನೀಡಲಾಗುವ ಐ.ಎಫ್‌.ಎ. ಮಾತ್ರೆಗಳನ್ನು ಸಹ ತಪ್ಪದೇ ವಿತರಿಸಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಸ್‌.ವಿ.ಮುನ್ಯಾಳ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಅಗತ್ಯವಿರುವ ಔಷಧಿ ಸಾಮಗ್ರಿಗಳನ್ನು ದಾಸ್ತಾನು ಇಟ್ಟುಕೊಳ್ಳಲಾಗಿದೆ. ಸಾರ್ವಜನಿಕ ಆಸ್ಪತ್ರೆಗಳು, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಔಷಧಿ ವಿತರಣೆಗೆ ಅಗತ್ಯವಾದ ಅನುದಾನ ಬಿಡುಗಡೆಯಾಗಬೇಕಿದೆ. ಇದಲ್ಲದೇ ಲಸಿಕಾ ವಾಹನ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

18 ವರ್ಷ ಮೇಲ್ಪಟ್ಟವರ ಮೊದಲ ಹಾಗೂ ಎರಡನೇ ಡೋಸ್‌ ಲಸಿಕೆ ವಿತರಣೆಯಲ್ಲಿ ಶೇ. 102 ರಷ್ಟು ಗುರಿ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಮೊದಲ ಡೋಸ್‌ ಪಡೆದುಕೊಂಡಿರುವ 1.90 ಲಕ್ಷ ಜನರು ಎರಡನೇ ಡೋಸ್‌ ಪಡೆದಿಲ್ಲ ಎಂದು ಆರ್‌ .ಸಿ.ಎಚ್‌.ಒ. ಡಾ| ಐ.ಪಿ.ಗಡಾದ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್‌ ಮಾತನಾಡಿ, ಜಿಲ್ಲೆಯ 20 ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿ ಸಂದರ್ಭದಲ್ಲಿ ಈ ಕೇಂದ್ರಗಳಲ್ಲಿ ಅಗತ್ಯವಿರುವ ಕೆಲಸಗಳನ್ನು ಮಾತ್ರ ಕೈಗೆತ್ತಿಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಯಾವುದೇ ದುರಸ್ತಿಯ ಕೆಲಸ ಬಾಕಿ ಉಳಿಯಬಾರದು. ಪಿಎಚ್‌ಸಿ ಬಳಿಕ ಸಮುದಾಯ ಆರೋಗ್ಯ ಕೇಂದ್ರಗಳ ದುರಸ್ತಿ ಕೆಲಸ ಆರಂಭಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಸಂತೋಷ ಕಾಮಗೌಡ, ಶಶಿಧರ್‌ ಬಗಲಿ, ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next