ಬೆಂಗಳೂರು: ಕೆಜಿಎಫ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್‌ನಲ್ಲಿ ಮಲ ಗುಂಡಿಗಳ ಸ್ವಚ್ಛತೆ ಕಾರ್ಯಕ್ಕೆ ಮನುಷ್ಯರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಸಂಬಂಧ ತನಿಖೆ ಪೂರ್ಣಗೊಳ್ಳಲಿ ಎಂದು ಹೈಕೋರ್ಟ್ ತಿಳಿಸಿದೆ.
ಈ ಆರೋಪ ಸಂಬಂಧ ಸಂಸ್ಥೆಯ ವಿರುದ್ಧ ಸ್ಥಳೀಯ ಪೊಲೀಸರು ಎಫ್ಐಆರ್ ದಾಖಲಿಸಬೇಕು ಎಂದು ಜೂ.9ರಂದು ಸಫಾಯಿ ಕರ್ಮಚಾರಿ ಆಯೋಗ ನೀಡಿದ್ದ ಆದೇಶ ರದ್ದುಪಡಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ, ಮಲಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸುವುದು ಅಪರಾಧವಾಗಿದೆ. ಈ ಆರೋಪದ ಬಗ್ಗೆ ತನಿಖೆ ನಡೆಸಲು ಆದೇಶಿಸಲು ಆಯೋಗಕ್ಕೆ ಅಧಿಕಾರವಿದೆ ಎಂದೂ ತಿಳಿಸಿದೆ.
ಸಫಾಯಿ ಕರ್ಮಚಾರಿ ಆಯೋಗದ ಆದೇಶ ರದ್ದುಕೋರಿ ಇನ್‌ಸ್ಟಿಟ್ಯೂಟ್‌ನ ಹಿರಿಯ ವಿಜ್ಞಾನಿ ರಾಜನ್ ಬಾಬು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಪೀಠ, ಈ ಆರೋಪದ ಬಗ್ಗೆ ತನಿಖೆ ಪೂರ್ಣಗೊಳ್ಳಲಿ ಎಂದು ಆದೇಶಿಸಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್‌ನ ಮಲಗುಂಡಿಗಳಲ್ಲಿ ಶೇಖರಣೆಯಾಗಿರುವ ಮಲವನ್ನು ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಜನರಲ್ ಲೇಬರ್ ಯೂನಿಯನ್ ಸಫಾಯಿ ಕರ್ಮಚಾರಿ ಆಯೋಗಕ್ಕೆ ದೂರು ನೀಡಿತ್ತು.
ಈ ದೂರನ್ನು ಪರಿಶೀಲಿಸಿದ್ದ ಆಯೋಗ ಪರಿಶೀಲನೆ ನಡೆಸಿದಾಗ, ಮಲಗುಂಡಿ ಸ್ವಚ್ಛತೆಗೆ ಮನುಷ್ಯರನ್ನು ಬಳಸಿಕೊಳ್ಳುತಿರುವ ಸಂಗತಿ ಗೊತ್ತಾಗಿತ್ತು. ಹೀಗಾಗಿ ಸಂಸ್ಥೆಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಯೋಗ ಸ್ಥಳೀಯ ಪೊಲೀಸರಿಗೆ ಆದೇಶಿಸಿತ್ತು.