Advertisement

ನಕ್ಸಲರಿಬ್ಬರ ವಿಚಾರಣೆ ಪೂರ್ಣ; ಮತ್ತೆ ನ್ಯಾಯಾಂಗ ಬಂಧನಕ್ಕೆ

10:46 PM May 10, 2022 | Team Udayavani |

ಕಾರ್ಕಳ: ಕಾರ್ಕಳ, ಹೆಬ್ರಿ, ಅಜೆಕಾರು ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ನಕ್ಸಲ್‌ ಚಟುವಟಿಕೆಗೆ ಸಂಬಂಧಿಸಿ ಪೊಲೀಸ್‌ ಕಸ್ಟಡಿಗೆ ಪಡೆದು ಸ್ಥಳ ಮಹಜರಿಗೆ ವಾರದ ಹಿಂದೆ ಕರೆತಂದಿದ್ದ ನಕ್ಸಲ್‌ ಮುಖಂಡ ಬಿ.ಜಿ. ಕೃಷ್ಣಮೂರ್ತಿ ಮತ್ತು ನಕ್ಸಲ್‌ ಸದಸ್ಯೆ ಸಾವಿತ್ರಿ ಅವರ ವಿಚಾರಣೆ ಪೂರ್ಣವಾದ ಹಿನ್ನೆಲೆಯಲ್ಲಿ ಪುನಃ ನ್ಯಾಯಾಂಗ ಬಂಧನಕ್ಕೆ ಮಂಗಳವಾರ ಒಪ್ಪಿಸಲಾಗಿದೆ.

Advertisement

ಚಿಕ್ಕಮಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇವರನ್ನು ಕಾರ್ಕಳ, ಹೆಬ್ರಿ, ಅಜೆಕಾರು ಠಾಣೆಗಳ ವ್ಯಾಪ್ತಿ ಯಲ್ಲಿ ನಡೆದ ನಕ್ಸಲ್‌ ಚಟುವಟಿಕೆ ಪ್ರಕರಣಗಳಿಗೆ ಸಂಬಂಧಿಸಿ ಮೇ 3ರಂದು ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು 12 ದಿನಗಳ ಅವಧಿಗೆ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಕಾರ್ಕಳ ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿರಿಸಿ ಸೀತಾನದಿ, ಮುಟ್ಲುಪ್ಪಾಡಿ, ಈದು, ನೂರಾಳ್‌ಬೆಟ್ಟು ಮೊದಲಾದ ಸ್ಥಳಗಳಿಗೆ ಕರೆದೊಯ್ದು ಹತ್ಯೆ ಪ್ರಕರಣ, ಕರಪತ್ರ ಹಂಚಿಕೆ, ಚಳವಳಿ ಇನ್ನಿತರ ವಿಚಾರಗಳಿಗೆ ಸಂಬಂಧಿಸಿ ವಿಚಾರಣೆ, ಸ್ಥಳ ಮಹಜರು ನಡೆಸಿದ್ದರು. ವಿಚಾರಣೆ ಪ್ರಕ್ರಿಯೆ 8 ದಿನಗಳಲ್ಲಿ ಪೂರ್ಣಗೊಂಡಿದೆ.

ಎಲ್ಲ ಪ್ರಶ್ನೆಗಳಿಗೆ ಇಬ್ಬರೂ ಸಕಾರಾ ತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ಪಾಲ್ಗೊಂಡ ಇತರರ ಮಾಹಿತಿ ಹಾಗೂ ಶರಣಾಗತಿ ಕುರಿತು ಕೂಡ ಪೊಲೀಸರು ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಬಿ.ಜಿ. ಕೃಷ್ಣಮೂರ್ತಿ ವಿರುದ್ಧ 53, ಸಾವಿತ್ರಿ ವಿರುದ್ಧ 22 ಪ್ರಕರಣಗಳಿವೆ. ಡಿವೈಎಸ್ಪಿ ವಿಜಯ ಪ್ರಸಾದ್‌, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ಅಜೆಕಾರು ಎಸ್‌ಐಗಳನ್ನೊಳಗೊಂಡ ತಂಡ ನಕ್ಸಲರಿಬ್ಬರನ್ನು ಬಿಗು ಬಂದೋಬಸ್ತ್ನಲ್ಲಿ ಮತ್ತೆ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಕರೆದೊಯ್ದು ಒಪ್ಪಿಸಿತು.

ಕೃಷ್ಣಮೂರ್ತಿ ಮತ್ತು ಸಾವಿತ್ರಿ ಕೇರಳದ ಗಡಿಭಾಗದ ವಯನಾಡ್‌ನ‌ಲ್ಲಿ 2021ರ ನ. 9ರಂದು ಎಟಿಎಸ್‌ನಿಂದ ಬಂಧನಕ್ಕೊಳಗಾಗಿದ್ದರು.

Advertisement

ನಕ್ಸಲರಿಬ್ಬರು ಇಂದು
ಕುಂದಾಪುರಕ್ಕೆ ?
ಬಿ.ಜಿ. ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಕುಂದಾಪುರದ ಹಳ್ಳಿಹೊಳೆಯ ಕೃಷಿಕ ಕೇಶವ ಅವರ ಹತ್ಯೆ ಹಾಗೂ ಇತರ ನಕ್ಸಲ್‌ ಚಟುವಟಿಕೆಗೆ ಸಂಬಂಧಿಸಿದ ಪ್ರಕರಣದ ಸ್ಥಳ ಮಹಜರು, ವಿಚಾರಣೆಗೆ ಮೇ 11ರಂದು ಕುಂದಾಪುರ ವಿಭಾಗದ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next