Advertisement

ಕ್ಷಣಮಾತ್ರದಲ್ಲಿ ಹಸು,ಮಾಲಕರ ಸಂಪೂರ್ಣ ಮಾಹಿತಿ​​​​​​​

06:15 AM May 29, 2018 | |

ಉಡುಪಿ:  ದೇಶದ್ಯಾಂತ ಕೇಂದ್ರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಹಮ್ಮಿಕೊಂಡ ಇನಾಫ್ (ಇನ್‌ಫೋರ್ಮೇಶನ್‌ ನೆಟ್‌ವರ್ಕ್‌ ಆನ್‌ ಎನಿಮಲ್‌ ಪ್ರೊಡಕ್ಟಿವಿಟಿ ಆ್ಯಂಡ್‌ ಹೆಲ್ತ್‌) ಕಾರ್ಯಕ್ರಮದಡಿ ಹಸುಗಳ ಗುರುತಿಸುವಿಕೆಗಾಗಿ ಜಿಲ್ಲೆಯಲ್ಲಿರುವ ಹಸುಗಳ ಕಿವಿಗೆ ವಿಶಿಷ್ಟ  ಗುರುತಿನ ಬಿಲ್ಲೆ  (ಕಿವಿಯೋಲೆ) ತೊಡಿಸುವ ಜಾನುವಾರು ಗಣತಿ (ನೋಂದಣಿ) ಕಾರ್ಯ ನಡೆಯುತ್ತಿದೆ. 

Advertisement

ಏನಿದು ಜಾನುವಾರು ಗಣತಿ?
ಗಣತಿಯಲ್ಲಿ 2 ವಿಭಾಗ ಮಾಡಲಾಗಿದ್ದು, ಜಾನುವಾರು ಮತ್ತು ಜಾನುವಾರುಗಳ ಮಾಲಕರ ನೋಂದಣಿಯೂ ಸೇರಿಕೊಂಡಿದೆ. ಹಸುವಿನ ವಯಸ್ಸು, ಹಸು ಮತ್ತು ಕರುವಿನ ಆರೋಗ್ಯ ಸ್ಥಿತಿ, ಹಸುವು ಎಷ್ಟು ಕರುಗಳನ್ನು ಹಾಕಿದೆ, ಕೃತಕ ಗರ್ಭಧಾರಣೆ, ಕರು ಹಾಕಿದ ದಿನಾಂಕ ಎಂಬಿತ್ಯಾದಿ ಮಾಹಿತಿ ಹಾಗೂ ಮಾಲಕರ ವಿಭಾಗದಲ್ಲಿ ಮಾಲಕರ ಹೆಸರು, ಆಧಾರ್‌ಕಾರ್ಡ್‌ ಇತ್ಯಾದಿ ಮಾಹಿತಿ ಒಳಗೊಂಡಿದೆ. 12 ಡಿಜಿಟ್‌ನ ಯುಐಡಿ ಟ್ಯಾಗ್‌ ಅನ್ನು ಅಪ್ಲಿಕೇಟರ್‌ ಮೆಷಿನ್‌ ಮೂಲಕ ಹಸುವಿನ ಕಿವಿಗೆ ಅಳವಡಿಸಲಾಗುತ್ತದೆ.
 
ಉಪಯೋಗ
ಹಸುವಿನ ಮಾಲಕರು ಬದಲಾದಾಗ, ಮಾಲಕರ ವಾಸ್ತವ್ಯ ಪ್ರದೇಶ ಬದಲಾವಣೆಗೊಂಡಾಗ, ಹಸುವೊಂದು ಯಾವುದೇ ಭಾಗದಲ್ಲಿ ಆಕಸ್ಮಿಕವಾಗಿ ಸಿಕ್ಕಾಗ ಜಾನುವಾರು ಗಣತಿ ಸಹಕಾರಿಯಾಗುತ್ತದೆ. ಹಸು ವಿಮೆ ಸೇರಿದಂತೆ ಸರಕಾರದಿಂದ ಸಿಗುವ ಸಹಾಯಧನ ಇತ್ಯಾದಿ ಯೋಜನೆಗಳನ್ನು ಪಡೆಯಲು ಇದು ಉಪಯೋಗವಾಗಲಿದೆ. ಹಸುವಿನ ಕಿವಿಯಲ್ಲಿ ಹಾಕಲ್ಪಟ್ಟ ಟ್ಯಾಗ್‌ನಲ್ಲಿರುವ ಸಂಖ್ಯೆಯನ್ನು ಆಲ್‌ಲೈನ್‌ನಲ್ಲಿ ನಮೂದಿಸಿದ ತಕ್ಷಣವೇ ಹಸು ಮತ್ತು ಮಾಲಕರ ಸಂಪೂರ್ಣ ವಿವರ ದೊರಕಲಿದೆ.

ಸರಕಾರಿ ಆದೇಶದಂತೆ ಹಾಲು ಕೊಡುವ ಪ್ರಾಣಿಗಳಾದ ಹಸು, ಎಮ್ಮೆ, ಆಡು ಇವುಗಳ ಗಣತಿ ಕಾರ್ಯವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದ್ದು, ಇದುವರೆಗೆ 13 ಸಾವಿರ ಹಸುಗಳಿಗೆ ಟ್ಯಾಗ್‌ ಮಾಡಲಾಗಿದೆ. 2012ರಲ್ಲಿ 19ನೇ ಜಾನುವಾರು ಗಣತಿ ನಡೆದ ಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 6,600 ಎಮ್ಮೆ, 2,52,000 ಹಸುಗಳಿವೆ. ಈ ವರ್ಷ ಹಾಲು ಹಿಂಡುವ 1,00,100 ಹಸು/ಎಮ್ಮೆಗಳಿಗೆ ಟ್ಯಾಗ್‌ ಮಾಡುವ ಗುರಿ ಹೊಂದಲಾಗಿದೆ. 20ನೇ ಜಾನುವಾರು ಗಣತಿ ಈ ವರ್ಷ ಇನ್ನಷ್ಟೇ ಪ್ರಾರಂಭವಾಗಬೇಕಿದೆ ಎಂದು ಇಲಾಖೆ ಮಾಹಿತಿ ನೀಡಿದೆ. 

ದನಗಣತಿ ಓಕೆ…ಕಿವಿಗೆ ಗಾಯ ಏಕೆ?
ನಮ್ಮ ಮನೆಯ ಹಸುವೊಂದರ ಕಿವಿಗೆ ಹಾಕಲ್ಪಟ್ಟ ಟಿಕ್ಕಿಯಿಂದಾಗಿ ಹಸುವಿನ ಕಿವಿಯಲ್ಲಿ ಗಾಯವಾಗಿದೆ. ಗಾಯದ ಮೇಲೆ ನೊಣ ಮುತ್ತಿಕೊಂಡು, ಹುಳವೂ ಆಗಿದೆ. ಇದರಿಂದ ಹಸು ಪ್ರತಿದಿನ ನೋವು ಅನುಭವಿಸುತ್ತಿದೆ. ಟಿಕ್ಕಿ ತೆಗೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಆದುದರಿಂದ ಇನ್ನಾದರೂ ಹಸುಗಳಿಗೆ ಟಿಕ್ಕಿ ಅಳವಡಿಸುವವರು ಹಸುವಿನ ಕಿವಿಗೆ ಯಾವುದೇ ಹಾನಿಯಾಗದಂತೆ ಹಾಕುವುದು ಒಳಿತು ಎಂದು ಗಣೇಶ್‌ ನಾಯ್ಕ… ಕೊಕ್ಕರ್ಣೆ ತಿಳಿಸಿದ್ದಾರೆ.

ಕಿವಿ ನೋವಾಗದಂತೆ ಟ್ಯಾಗ್‌ ಅಳವಡಿಕೆ
ಟ್ಯಾಗ್‌ ಅಳವಡಿಸುವ ಸಂದರ್ಭ ಹಸುವಿನ ಕಿವಿಗೆ ನೋವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಟ್ಯಾಗ್‌ ಮಾಡುವಾಗ ಹಸು ಒದ್ದಾಡುವುದು, ನೆಗೆಯುವುದು, ಹಸುವನ್ನು ಹಿಡಿದುಕೊಳ್ಳುವವರ ಸಂಖ್ಯೆ ಕಡಿಮೆಯಿದ್ದಲ್ಲಿ ಹಸುವಿನ ಕಿವಿಗೆ ಆಕಸ್ಮಿಕವಾಗಿ ನೋವಾದರೆ ಆಯಾಯ ಭಾಗದ ಇಲಾಖೆಯ ಸಿಬಂದಿಗಳು ಶುಶ್ರೂಷೆ ನೀಡುತ್ತಾರೆ. ಹೀಗೆ ಹಸುವಿನ ಕಿವಿ ನೋವಾದ ಒಂದೆರಡು ಪ್ರಕರಣಗಳು ನಡೆದಿವೆಯಷ್ಟೇ. ಈ ಹಿಂದೆ ಬ್ಯಾಂಕಿನಿಂದ ಪಶು ಸಾಲ ಪಡೆಯುವ ಸಂದರ್ಭ ಕಿವಿಗೆ ಟ್ಯಾಗ್‌ ಹಾಕಲಾಗುತ್ತಿತ್ತು. ಆದರೆ ಈಗ ಎಲ್ಲ ಜಾನುವಾರುಗಳಿಗೂ ಹಾಕಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಆತಂಕ ಬೇಡಬೇಕಾಗಿಲ್ಲ. ಕಿವಿ ನೋವಾದ ಬಗ್ಗೆ ಮಾಲಕರಿಂದ ಮಾಹಿತಿ ಬಂದಲ್ಲಿ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಡಾ| ಹರೀಶ್‌ ತಮಣ್‌ಕರ್‌, 
ಪ್ರಭಾರ ಉಪನಿರ್ದೇಶಕರು, ಪಶುಪಾಲನಾ ಇಲಾಖೆ ಉಡುಪಿ.

Advertisement

– ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next