ಕೊಪ್ಪಳ: ಡಿಬಿಒಟಿ ಕಾಮಗಾರಿಗೆ ಹೆಚ್ಚು ಕಾರ್ಮಿಕರನ್ನು ನಿಯೋಜಿಸಿ, 200 ಗ್ರಾಮಗಳಿಗೆ ಬಾಕಿ ಇರುವ ನೀರು ಸರಬರಾಜು ಕಾಮಗಾರಿಯನ್ನು ಜೂ. 13ರೊಳಗಾಗಿ ಪೂರ್ಣಗೊಳಿಸಬೇಕೆಂದು ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್ ಅವರು ಹೇಳಿದರು.
ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ನಡೆದ ಡಿಬಿಒಟಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಡಿಬಿಒಟಿ ಕಾಮಗಾರಿಗಳು ಯಲಬುರ್ಗಾ ಮತ್ತು ಕುಷ್ಟಗಿಯಲ್ಲಿ 2017ರ ಅ. 6ಕ್ಕೆ ಪ್ರಾರಂಭವಾಗಿ 2021ರ ಅ. 5ರಂದು ಪೂರ್ಣಗೊಳ್ಳಬೇಕಿತ್ತು. ಆದರೆ ಈ ಕಾಮಗಾರಿ ಪ್ರಾರಂಭವಾಗಿ 3 ವರ್ಷ ಕಳೆದರೂ ಸುಮಾರು 200 ಗ್ರಾಮಗಳಲ್ಲಿ ಡಿಬಿಇಟಿ ಕಾಮಗಾರಿಗೆ ಪೂರ್ಣಗೊಂಡಿಲ್ಲ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡು ಗ್ರಾಮಗಳಲ್ಲಿ ಕುಡಿಯುವ ನೀರು ಒದಗಿಸಬೇಕು ಎಂದು ಸೂಚಿಸಿದರು.
236 ಒಎಚ್‌ಟಿ ನೀರಿನ ಟ್ಯಾಂಕ್‌ಗಳನ್ನು ಹಾಗೂ ಎಂಬಿಆರ್ ನಿಂದ ಒಎಚ್‌ಟಿ ಟ್ಯಾಂಕ್‌ಗಳಿಗೆ ನೀರಿನ ಪೈಪ್‌ಲೈನ್ ಜೋಡಣೆ ಮಾಡುವುದು ಇನ್ನೂ 5.9 ಕಿ.ಮೀ. ಬಾಕಿ ಇದ್ದು, ಬಾಕಿ ಕಾಮಗಾರಿಯನ್ನು ಜುಲೈ-2022 ರ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು. ಕುಷ್ಟಗಿ ತಾಲೂಕಿನಲ್ಲಿ 9 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 3 ಎಂಬಿಆರ್‌ಗಳ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವ ಜೊತೆಗೆ ಒಎಚ್‌ಟಿಗಳಿಂದ ನಳಗಳಿಗೆ ಪೂರೈಕೆ ಮಾಡುವ ನೀರಿನ ಗುಣಮಟ್ಟವನ್ನು ಎಫ್‌ಟಿಕೆ ಕಿಟ್ ಮುಖಾಂತರ ಪ್ರತಿ ಹಂತದಲ್ಲಿ ಪರಿಶೀಲನೆ ಮಾಡಿ, ವ್ಯತ್ಯಾಸವಾಗದಂತೆ ಶುದ್ಧ ನೀರನ್ನು ಪೂರೈಸಬೇಕು ಹಾಗೂ 18 ಗ್ರಾಮಗಳಲ್ಲಿ ಬಾಕಿ ಇರುವ ರಿಕ್ಲೋರಿನೇಷನ್ ಯೂನಿಟ್ ಮಾಡುವುದು ಬೇಗನೆ ಪೂರ್ಣಗೊಳಿಸಬೇಕು ಎಂದರು.
ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟಾರೆ 331 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಇದುವರೆಗೆ 295 ಗ್ರಾಮಗಳಲ್ಲಿ ಕಾಮಗಾರಿ ಕೈಗೊಂಡಿದ್ದು, ಅದರಲ್ಲಿ 179 ಗ್ರಾಮಗಳ ಕಾಮಗಾರಿ ಪೂರ್ಣಗೊಂಡಿರುವ ಕುರಿತು ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆ, ಯಲಬುರ್ಗಾ, ಕುಷ್ಟಗಿ ಉಪ ವಿಭಾಗಗಳ ಶಾಖಾಧಿಕಾರಿಗಳು ಹಾಗೂ ಆಯಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ, ಸಮರ್ಪಕ ನೀರು ಸರಬರಾಜು ಆಗುತ್ತಿರುವ ಬಗ್ಗೆ ದೃಢೀಕರಿಸಿದ್ದಾರೆ. ಇನ್ನೂ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳು ಪ್ರಸ್ತುತ ಇರುವ ಒಎಚ್ ಟಿಗಳಿಗೆ ಡಿಬಿಒಟಿಯ ನೀರನ್ನು ತುಂಬಿಸಲು ಒಎಚ್‌ಟಿವರೆಗೂ ಡಿಬಿಒಟಿ ನೀರಿನ ಪೈಪಲೈನ್ ಮಾಡವುದು ಬಾಕಿ ಇದೆ. ಯಲಬುರ್ಗಾದಲ್ಲಿ 98 ಹೊಸ ಒಎಚ್‌ಟಿ ಕಾಮಗಾರಿಗಳಲ್ಲಿ 61 ಪೂರ್ಣಗೊಂಡಿದ್ದು, ಕುಷ್ಟಗಿ ತಾಲೂಕಿನಲ್ಲಿ 138 ರಲ್ಲಿ 106 ಪೂರ್ಣಗೊಂಡು, ಒಟ್ಟು 236 ಹೊಸ ಒಎಚ್‌ಟಿಗಳ ಪೈಕಿ 167 ಒಎಚ್‌ಟಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ ಎಂದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತರರು, ಸಂಬಂಧಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕುಷ್ಟಗಿ, ಯಲಬುರ್ಗಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಶಾಖಾಧಿಕಾರಿಗಳು, ಎಲ್ ಎನ್‌ಟಿ ಕಂಪನಿಯ ಯೋಜನಾ ವ್ಯವಸ್ಥಾಪಕರು ಮತ್ತು ಪಿಎಂಸಿ ಹಾಗೂ ಎಸ್‌ಎಂಇ.ಸಿ ಏಜೆನ್ಸಿಗಳ ಪ್ರತಿನಿಧಿಗಳು ಉಪಸ್ಥಿರಿದ್ದರು.