ಚಾಮರಾಜನಗರ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾಮಗಾರಿಯನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚಿಸಿದರು.
ಬಿಳಿಗಿರಿರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿ ಕೈಗೊಂಡಿರುವ ವಿಮಾನ ಗೋಪುರ, ಪ್ರಾಕಾರ ಗೋಪುರದಲ್ಲಿನ ವಿಗ್ರಹಗಳನಿರ್ಮಾಣಮತ್ತಿತರಕಾಮಗಾರಿಯನ್ನು ಪರಿಶೀಲಿಸಿದರು.
ಗರ್ಭಗುಡಿಗಳಿಗೆ ಗ್ರಾನೈಟ್ ಅಳವಡಿಕೆ ಕಾರ್ಯವನ್ನು ವೀಕ್ಷಿಸಿದ ಅವರು, ನಿರ್ಮಾಣವಾಗಿರುವ ಯಾಗಶಾಲೆಗೆ ಬಾಕಿ ಉಳಿದಿರುವ ವಿದ್ಯುತ್ ವೈರಿಂಗ್, ಬಾಗಿಲುಗಳ ಅಳವಡಿಕೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ರಾಜಗೋಪುರಕ್ಕೆ ಸಾಗುವ ತಾತ್ಕಾಲಿಕ ಮೆಟ್ಟಿಲುಗಳ ನಿರ್ಮಾಣ, ರೈಲಿಂಗ್ಸ್ ಹಾಕುವ ಕೆಲಸಗಳನ್ನು ತ್ವರಿತವಾಗಿ ಕೈಗೊಳ್ಳಬೇಕೆಂದರು.
ಅಂದಾಜು ಪಟ್ಟಿ ಸಲ್ಲಿಸಿ: ದೇವಾಲಯದ ಹೊರ ಪ್ರಕಾರದಲ್ಲಿ ಪ್ರವಾಸೋದ್ಯಮ ಹಾಗೂ ರಾಜ್ಯ ಪ್ರಾಚ್ಯವಸ್ತು ಇಲಾಖೆ ವತಿಯಿಂದ ಹಾಕಲಾಗುತ್ತಿರುವ ನೆಲ ಹಾಸು ಕೆಲಸವನ್ನು ಸಹ ವಿಳಂಬ ಮಾಡಬಾರದು. ದೇವಾಲಯದ ಪ್ರಸ್ತುತ ನಿತ್ಯ ಅನ್ನದಾಸೋಹ ಭವನದ ಕಟ್ಟಡವನ್ನು ಶಾಶ್ವತವಾಗಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಬೇಕು, ಸುತ್ತು ಗೋಡೆ ನಿರ್ಮಾಣಕ್ಕೂ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ತಿಳಿಸಿದರು.
ಉದ್ಯಾನವನ: ದೇವಾಲಯದ ಹಿಂಭಾಗದಲ್ಲಿರುವ ಕಮರಿ ವೀಕ್ಷಣಾ ಸ್ಥಳದ ಆವರಣದಲ್ಲಿ ಉತ್ತಮ ಉದ್ಯಾನವನ ನಿರ್ಮಿಸಬೇಕು. ವೀಕ್ಷಣಾಸ್ಥಳವನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯ ವಿರುವ ಕೆಲಸಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಬಿಳಿಗಿರಿ ಭವನ ಅತಿಥಿ ಗೃಹಕ್ಕೆ ಭೇಟಿ ನೀಡಿ ಅಲ್ಲಿನ ಮೇಲಂತಸ್ತಿನಲ್ಲಿ ನಿರ್ಮಾಣವಾಗುತ್ತಿರುವ ಕೊಠಡಿ ಕಟ್ಟಡಗಳ ಕಾಮಗಾರಿ ಪರಿಶೀಲಿಸಿದರು. ಅಪೂರ್ಣವಾಗಿರುವ ಕಟ್ಟಡವನ್ನು ಶೀಘ್ರವೇ ಪೂರ್ಣಗೊಳಿಸಬೇಕು, ಕೊಠಡಿಗಳಿಗೆ ಅಗತ್ಯವಿರುವ ಪೀಠೊಪಕರಣಗಳ ಅಳವಡಿಕೆ, ನೆಲ ಅಂತಸ್ತಿನ ಕೊಠಡಿಗಳ ದುರಸ್ತಿ, ವಿದ್ಯುತ್ ವೈರಿಂಗ್, ಸುಣ್ಣ ಬಣ್ಣ ಬಳಿಯುವಿಕೆ, ಕೊಳಾಯಿಗಳ ಸಂಪರ್ಕಕ್ಕೆ ತಗಲಬಹುದಾದ ವೆಚ್ಚದ ಅಂದಾಜು ಪಟ್ಟಿಯನ್ನು ಸಲ್ಲಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಡಿ.ಸತೀಶ್, ದೇವಾಲಯದ ಅರ್ಚಕ ವೃಂದ, ಇತರೆ ಅಧಿಕಾರಿಗಳು ಹಾಜರಿದ್ದರು.