Advertisement

ಬೆದ್ರಾಡಿ, ಜಲಧರ ಕಾಲನಿ ಅಂಗನವಾಡಿ ಕಟ್ಟಡ ಪೂರ್ಣಗೊಳಿಸಿ

12:19 PM Dec 01, 2018 | Team Udayavani |

ಈಶ್ವರಮಂಗಲ: ನೆಟ್ಟಣಿಗೆಮುಟ್ನೂರು ಗ್ರಾಮದ ಬೆದ್ರಾಡಿ ಅಂಗನವಾಡಿ ಕೇಂದ್ರವು ಒಂದೂವರೆ ವರ್ಷದಿಂದ ತಾತ್ಕಾಲಿಕವಾಗಿ ಶೆಡ್‌ನ‌ಲ್ಲಿ ಮತ್ತು ಜಲಧರ ಕಾಲನಿಯ ಅಂಗನವಾಡಿ ಕೇಂದ್ರ ಅಂಬೇಡ್ಕರ್‌ ಭವನದಲ್ಲಿ ನಡೆಯುತ್ತಿವೆ. ನೂತನ ಕಟ್ಟಡಗಳ ನಿರ್ಮಾಣವು ನಡೆಯುತ್ತಿದ್ದು, ಶೀಘ್ರವಾಗಿ ಕಾಮಗಾರಿ ಮುಗಿಸಿ, ಪುಟಾಣಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಮೇನಾಲ ಜಲಧರ ಕಾಲನಿ ಅಂಗನವಾಡಿ ಕೇಂದ್ರ 2007ರಲ್ಲಿ ಪ್ರಾರಂಭವಾಗಿದ್ದು, ಕಾಲನಿಯ ಅಂಬೇಡ್ಕರ್‌ ಭವನದಲ್ಲಿ ನಡೆಯುತ್ತಿದೆ. ಪ್ರಾರಂಭದಲ್ಲಿ 8 ಮಕ್ಕಳ ಹಾಜರಾತಿ ಇತ್ತು. ಇದೀಗ ಕೇಂದ್ರದಲ್ಲಿ 9 ಗಂಡು, 15 ಹೆಣ್ಣು ಮಕ್ಕಳ ಸಹಿತ ಒಟ್ಟು 24 ಹಾಜರಾತಿ ಇದೆ. ನೀರಿನ ವ್ಯವಸ್ಥೆ, ಗ್ಯಾಸ್‌ ಎಲ್ಲವೂ ಇದ್ದರೂ ಪುಟಾಣಿಗಳ ಚಟುವಟಿಕೆ, ದಾಸೋಹ ಎಲ್ಲವೂ ಒಂದೇ ಕೊಠಡಿಯಲ್ಲಿ ಆಗಬೇಕಾಗಿದೆ. ಎಲ್ಲ ಮಕ್ಕಳು ಕೇಂದ್ರಕ್ಕೆ ಬಂದರೆ ಭವನದಲ್ಲಿ ಸ್ಥಳಾವಕಾಶ ಸಾಲದು. ಇದೀಗ ಭವನದಿಂದ ಸುಮಾರು 60 ಮೀ. ದೂರದಲ್ಲಿ ನರೇಗಾ ಯೋಜನೆಯಲ್ಲಿ ನೂತನ ಕಟ್ಟಡದ ಅಡಿಪಾಯ ಕಾರ್ಯ ಆಗಿದೆ. ಈ ಕಟ್ಟಡ ಶೀಘ್ರ ಪೂರ್ಣಗೊಳ್ಳಬೇಕಿದೆ. ಕೇಂದ್ರಕ್ಕೆ ಸಮರ್ಪಕವಾದ ರಸ್ತೆ ಅಭಿವೃದ್ಧಿಯೂ ಆಗಬೇಕಾಗಿದೆ.

ಜಿ.ಪಂ. ಸಿಇಒ ಪತ್ರ
ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಜಿ. ಪಂ.ನಿಂದ ಬಂದ ಪತ್ರವನ್ನು ಉಲ್ಲೇಖೀಸಲಾಯಿತು. ಪತ್ರದಲ್ಲಿ 2017-18ನೇ ಸಾಲಿನಲ್ಲಿ ನೆಟ್ಟಣಿಗೆಮುಟ್ನೂರು ಗ್ರಾ.ಪಂ.ನ ಜಲಧರ ಕಾಲನಿ ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲಿಸಿದಾಗ 2018ರ ಸೆಪ್ಟಂಬರ್‌ಗೆ ಸಮತಟ್ಟು ಮಾತ್ರ ಆಗಿರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ, ಕಟ್ಟಡದ ಚಿತ್ರಗಳೊಂದಿಗೆ ವರದಿ ಮಾಡುವಂತೆ ಜಿ.ಪಂ. ಸಿಇಒ ಅಧಿಕಾರಿ ಡಾ| ಆರ್‌. ಸೆಲ್ವಮಣಿ ಸೂಚಿಸಿದ್ದಾರೆ.

ಬೆದ್ರಾಡಿ ಅಂಗನವಾಡಿ ಕೇಂದ್ರದಲ್ಲಿ 5 ಗಂಡು, 9 ಹೆಣ್ಣು ಸಹಿತ 14 ಮಕ್ಕಳಿದ್ದು, ಒಂದೂ ವರೆ ವರ್ಷಗಳಿಂದ ಸುಮಾರು 200 ಮೀ. ದೂರದಲ್ಲಿರುವ ತಾತ್ಕಾಲಿಕ ಶೆಡ್‌ ಒಂದರಲ್ಲಿ ಕಾರ್ಯಾಚರಿಸುತ್ತಿದೆ. ಕೇಂದ್ರದ ಹಳೆಯ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದ್ದು, ನೂತನ ಕಟ್ಟಡಕ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದ್ದರು. ನಬಾರ್ಡ್‌ ಯೋಜನೆಯಲ್ಲಿ ಒಟ್ಟು 14 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ಕಾಮಗಾರಿ ನಡೆಸಲಾಗಿದ್ದು, ಕೆಲಸಕಾರ್ಯ ಅಂತಿಮಗೊಂಡಿದೆ.

ಶೆಡ್‌ನ‌ಲ್ಲಿ ಸಮಸ್ಯೆಗಳ ಆಗರ
ಬೆದ್ರಾಡಿ ಅಂಗನವಾಡಿ ಕೇಂದ್ರವು ಖಾಸಗಿ ಸ್ಥಳದಲ್ಲಿ ದಾನಿಯೊಬ್ಬರು ಸಿಮೆಂಟ್‌ ಶೀಟ್‌ ಆಳವಡಿಸಿದ ಶೆಡ್‌ನ‌ಲ್ಲಿ ನಡೆಯುತ್ತಲಿದ್ದು, ಶೌಚಾಲಯಕ್ಕಾಗಿ ಸಮೀಪದ ಮನೆಯನ್ನು ಅವಲಂಬಿಸಬೇಕು. ಆಹಾರ ದಾಸ್ತಾನು ಇಡಲು ವ್ಯವಸ್ಥೆಯೇ ಇಲ್ಲ. ಬಿಸಿಲಿನ ತಾಪ ಹೆಚ್ಚಿರುವುದರಿಂದ ಸಿಮೆಂಟ್‌ ಶೀಟ್‌ ಗಳ ಮೂಲಕ ಸೆಕೆ ಹೆಚ್ಚುತ್ತಿದೆ. ಡಾಮರು ರಸ್ತೆಯಿಂದ ಶೆಡ್‌ಗೆ ಬರಲು ಸರಿಯಾದ ವ್ಯವಸ್ಥೆ ಇಲ್ಲದೇ ಪೊದರು ತುಂಬಿದ ರಸ್ತೆಯಲ್ಲೇ ಬರಬೇಕು. ಆಹಾರದ ಪೊಟ್ಟಣ, ಗ್ಯಾಸ್‌ ಹೊತ್ತು ತರಬೇಕು. ಬರುವ ಮಳೆಗಾಲದ ಮೊದಲು ಸ್ಥಳಾಂತರವಾಗದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು.

Advertisement

ಸಭೆಯಲ್ಲಿ ಪ್ರತಿಧ್ವನಿ
ಜಲಧರ ಕಾಲನಿ ಮತ್ತು ಬೆದ್ರಾಡಿ ಅಂಗನವಾಡಿ ಕೇಂದ್ರಗಳ ಬಗ್ಗೆ ನೆಟ್ಟಣಿ ಗೆಮುಟ್ನೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪ್ರಸ್ತಾವಿಸಿದರೆ, ಜಮಾಬಂದಿ ಸಭೆಯಲ್ಲಿ ಪುತ್ತೂರು ತಾ| ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಾಂತಿ ಹೆಗ್ಡೆ ಪ್ರಸ್ತಾವಿಸಿದರು. ಮಕ್ಕಳ ಗ್ರಾಮಸಭೆಯಲ್ಲಿಯೂ ಈಶ್ವರಮಂಗಲ ಅಂಗನವಾಡಿ ಕೇಂದ್ರಗಳ ಮೇಲ್ವಾಚಾರಕಿ ಸರೋಜಿನಿ ಕೆ. ಪ್ರಸ್ತಾವಿಸಿದ್ದರು. 

ತೊಂದರೆಯಾಗಿಲ್ಲ
ನಮ್ಮ ಇಲಾಖೆಯಿಂದ ಯಾವುದೇ ತೊಂದರೆ ಇಲ್ಲ. ಸಭೆಯನ್ನು ನಡೆಸಲಾಗಿದೆ. ಎಂಜಿನಿಯರ್‌ ಜತೆ ಮಾತನಾಡಿದ್ದೇನೆ. ಕಾಮಗಾರಿ ಮಾಡುತ್ತಾರೆ. ಜಲಧರ ಕಾಲನಿಯ ಬಗ್ಗೆ ಪಂಚಾಯತ್‌ಗೆ ಸಿಇಒ ಪತ್ರ ಕೊಟ್ಟಿದ್ದಾರೆ. ಕಾಮಗಾರಿ ಪೂರ್ತಿಯಾಗುವ ಭರವಸೆ ಇದೆ.
– ಶಾಂತಿ ಹೆಗ್ಡೆ,
 ತಾ| ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ

 ಹಸ್ತಾಂತರವಾಗಬೇಕು
ಬೆದ್ರಾಡಿ ಅಂಗನವಾಡಿ ಕೇಂದ್ರದ ಕೆಲಸ ಮುಗಿದಿದೆ. ನಿರ್ಮಿತಿ ಕೇಂದ್ರ ಅದನ್ನು ಹಸ್ತಾಂತರಿಸಬೇಕಿದೆ. ಕಾಮಗಾರಿ ಪೂರ್ತಿ ಮಾಡಿಕೊಡಬೇಕು. ಪಂಚಾಯತ್‌ ವತಿಯಿಂದ ಜಲಧರ ಕಾಲನಿಯಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಬೇಕಾಗಿದೆ. ಜಾಗದ ಸಮತಟ್ಟು ಕಾರ್ಯ ಆಗಿದೆ.
 - ಶ್ರೀರಾಮ್‌ ಪಕ್ಕಳ,
    ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಉಪಾಧ್ಯಕ್ಷರು 

ಮಾಧವ ನಾಯಕ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next