Advertisement

ಹಾನಿಯಾದ ಮನೆ ಸಮೀಕ್ಷೆ ಪೂರ್ಣಗೊಳಿಸಿ

04:43 PM Aug 25, 2020 | Suhan S |

ಹಾವೇರಿ: ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆ ಎರಡು ದಿನಗಳಲ್ಲಿ ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾ ಗುರುಭವನದಲ್ಲಿ ಸೋಮವಾರ ಜರುಗಿದ ಹಾವೇರಿ ತಾಲೂಕಿನಲ್ಲಿ ನೆರೆಹಾನಿ ಮನೆಗಳ ವಿಶೇಷ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಮನೆಗಳ ಸಮೀಕ್ಷೆಗೆ ಗಡುವು ನೀಡಲಾಗಿದೆ. ಆದರೂ ಮನೆಗಳ ಸಮೀಕ್ಷೆ ವಿಳಂಬವಾಗುತ್ತಿದೆ. ಇಂಜಿನಿಯರ್‌ಗಳ ಕೊರತೆಯಾಗಿದ್ದರೆ ಪಿಆರ್‌ಡಿ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡು ಶೀಘ್ರ ಹಾನಿಯಾದ ಮನೆಗಳ ಸಮೀಕ್ಷೆ ಪೂರ್ಣಗೊಳಿಸಬೇಕು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಈ ಕಾರ್ಯಕ್ಕೆ ನಿಯೋಜಿಸಲಾದ ನೋಡಲ್‌ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಫಲಾನುಭವಿಗಳು ತಪ್ಪು ಮಾಹಿತಿ ನೀಡಿದರೆ ಅವರ ಮೇಲೆ ಸಹ ಕ್ರಮ ಕೈಗೊಳ್ಳಬಹುದು. ಕಾರಣ ಜಾಗರೂಕತೆಯಿಂದ ನೈಜ ಫಲಾನುಭವಿಗಳ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಸಮಯ ಕಡಿಮೆ ಇದ್ದು ಎಲ್ಲರೂ ನೀಡಿದ ಕೆಲಸ ನಿಗ ದಿತ ಸಮಯದಲ್ಲಿ ಮುಗಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ನಾವು ಸಹ ಕ್ರಾಸ್‌ ಚೆಕ್‌ ಮಾಡುತ್ತೇವೆ. ಈ ಸಂದರ್ಭದಲ್ಲಿ ಏನಾದರೂ ತಪ್ಪು ಕಂಡುಬಂದರೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಶಾಸಕ ನೆಹರು ಓಲೇಕಾರ ಮಾತನಾಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು ಕಳೆದ ಸಾಲಿನಲ್ಲಿ 50 ಸಾವಿರ ರೂ. ಪರಿಹಾರ ಪಡೆದ ಫಲಾನುಭವಿಗಳ ಪಟ್ಟಿ ಮಾಡಿ. ಇಂತಹ ಮನೆಗಳ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಕಾರಣ ಹಾನಿಗೊಳಗಾದ ಮನೆಗಳ ಸಮೀಕ್ಷೆಗೆ ತಕ್ಷಣ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಹಾವೇರಿ ತಾಲೂಕಿನಲ್ಲಿ 33 ಗ್ರಾಪಂಗಳಲ್ಲಿ 657 ಅರ್ಜಿಗಳ ಪೈಕಿ 116 ಫಲಾನುಭವಿಗಳು ಅರ್ಹರೆಂದು ತಿಳಿಸಲಾಗಿದ್ದು, ಇನ್ನುಳಿದ 448ಅರ್ಜಿ ಪರಿಶೀಲನೆ ನಡೆಯುತ್ತಿದೆ. ಈ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು, ಇಂಜಿನಿಯರ್‌ಗಳು ಮನೆ ಮನೆಗೆ ಭೇಟಿ ನೀಡಿ ಶೀಘ್ರ ಸಮೀಕ್ಷೆ ಕೈಗೊಳ್ಳಬೇಕು. ಅನರ್ಹರನ್ನು ಆಯ್ಕೆ ಮಾಡಬಾರದು ಹಾಗೂ ಅರ್ಹ ಫಲಾನುಭವಿ ಕೈತಪ್ಪಿ ಹೋಗಬಾರದು ಎಂದರು.

Advertisement

ಕಳೆದ ಸಾಲಿನ ಸಮೀಕ್ಷೆಯಲ್ಲಿ ನಡೆದ ತಪ್ಪುಗಳನ್ನು ಈವರೆಗೆ ಸರಿ ಮಾಡಲಾಗುತ್ತಿಲ್ಲ. ಕಾರಣ ಈ ಸಮೀಕ್ಷೆ ಎಚ್ಚರಿಕೆಯಿಂದ ಮಾಡಬೇಕು. ಮನೆ ಹಾನಿ ಶೇಕಡಾವಾರನ್ನು ಅಕ್ಷರದಲ್ಲಿ ದಾಖಲಿಸಬೇಕು. ಹಾನಿಯ ಮನೆಯ ವಿವಿಧ ಭಂಗಿಯ ಛಾಯಾಚಿತ್ರಗಳು, ಅಗತ್ಯ ದಾಖಲೆ ನೀವೇ ಕ್ರೋಢೀಕರಿಸಿಕೊಳ್ಳಬೇಕು. ಫಲಾನುಭವಿಗಳಿಂದ ಆಧಾರ್‌ ಹಾಗೂ ರೇಷನ್‌ ಕಾರ್ಡ್‌ ಮಾತ್ರ ಪಡೆಯಬೇಕು. ವಿವಿಧ ಯೋಜನೆಗಳ ಸರ್ಕಾರದಿಂದ ನೀಡಿದ ಮನೆಗಳು ಬಿದ್ದಿದ್ದರೆ ಅಂತಹ ಮನೆಗಳಿಗೂ ಪರಿಹಾರ ನೀಡಬಹುದು. ಆದರೆ ವಾಸದ ಮನೆ ಚೆನ್ನಾಗಿದ್ದು, ವಾಸವಿಲ್ಲದ ಮನೆ ಬಿದ್ದಿದ್ದರೆ ಅಂತಹ ಮನೆಗೆ ಪರಿಹಾರ ನೀಡಲು ಬರುವುದಿಲ್ಲ ಎಂದು ಹೇಳಿದರು.

ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಮನೆಗಳ ಸಮೀಕ್ಷೆ ಕುರಿತು ಪರಿಶೀಲನೆ ನಡೆಸಿದ ಅವರು ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ನಿರ್ಮಾಣ ವಿವಿಧ ಹಂತದಲ್ಲಿದ್ದು, 3 ಮತ್ತು 4ನೇ ಹಂತದ ಮನೆಗಳ ಫಲಾನುಭವಿಗಳಿಗೆ ಮನರೇಗಾ ಯೋಜನೆಯಡಿ 28 ದಿನದ ಹಣ 10 ಸಾವಿರ ರೂ. ನೀಡಿದರೆ ಬಡವರಿಗೆ ಅನುಕೂಲವಾಗುತ್ತದೆ. ಕಾರಣ ಇನ್ನೆರಡು ದಿನದಲ್ಲಿ ಇಂತಹ ಮನೆಗಳ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ| ದಿಲೀಷ್‌ ಶಶಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ, ನಗರಸಭೆ ಪೌರಾಯುಕ್ತ ಬಸವರಾಜ ಜಿದ್ದಿ, ತಹಶೀಲ್ದಾರ್‌ ಶಂಕರ, ನೋಡಲ್‌ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next