Advertisement

Malpe ಮೀನುಗಾರರಿಗೆ ಪೂರಕ ಸರಕಾರ: ಸಚಿವ ವೈದ್ಯ

11:17 PM Feb 05, 2024 | Team Udayavani |

ಮಲ್ಪೆ: ಮೀನುಗಾರರಿಗೆ ಪೂರಕವಾದ ಅಭಿವೃದ್ಧಿ ಕೆಲಸಕ್ಕೆ ಸರಕಾರ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಮೀನುಗಾರರ ಎಲ್ಲ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಮೂಲಕ ಮೀನುಗಾರರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್‌. ವೈದ್ಯ ಹೇಳಿದರು.

Advertisement

ಅವರು ಸೋಮವಾರ ಮಲ್ಪೆಯಲ್ಲಿ ಮಲ್ಪೆ ಫಿಶ್‌ ಟ್ರೇಡ್‌ ಸೆಂಟರನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ವತಿಯಿಂದ ನಿರ್ಮಾಣಗೊಳ್ಳಲಿರುವ ಶೀತಲೀಕರಣ ಘಟಕ ಸಹಿತ ಮೀನುಗಾರಿಕೆಗೆ ಸಂಬಂಧಿಸಿದ ಕೆಲವು ಸೌಲಭ್ಯಗಳಿಗೆ ಹೆಚ್ಚುವರಿ ಜಾಗ ಮಂಜೂರು ಮತ್ತು ಮೀನುಗಾರರಿಗಾಗಿ ಯಾವುದೇ ಯೋಜನೆ ಪ್ರಸ್ತಾವಿಸಿದರೂ ತತ್‌ಕ್ಷಣ ಮಾಡಿ ಕೊಡಲು ಸಿದ್ಧ ಎಂದರು.

ರಾಜ್ಯದ ಪ್ರೋತ್ಸಾಹವೂ ಸಿಗಲಿ
ವಾಹನ ನಿಲುಗಡೆಯನ್ನು ಉದ್ಘಾಟಿಸಿದ ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಮತ್ಸéಸಂಪದ ಯೋಜನೆಯ ಮೂಲಕ ಕೇಂದ್ರ ಸರಕಾರ ಮೀನುಗಾರರಿಗೆ ಯಾವ ರೀತಿ ಪ್ರೋತ್ಸಾಹ ನೀಡುತ್ತಿದೆಯೋ ತಮ್ಮ ನೇತೃತ್ವದಲ್ಲಿ ರಾಜ್ಯ ಸರಕಾರವೂ ಅದೇ ರೀತಿಯಲ್ಲಿ ಕೆಲಸ ಮಾಡುವಂತಾಗಬೇಕು. ಈ ನೆಲೆಯಲ್ಲಿ ಮುಂದಿನ ಬಜೆಟಿನಲ್ಲಿ 350 ಕೋ.ರೂ.ನಿಂದ 1 ಸಾವಿರ ಕೋ.ರೂ.ಗಳಿಗೆ ಏರಿಸಬೇಕು ಎಂದರು.

ಸಮಸ್ಯೆ ಪರಿಹರಿಸಿ
ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಮೀನು ವ್ಯಾಪಾರ ಸಮುಚ್ಚಯವನ್ನು ಉದ್ಘಾಟಿಸಿ, ಸರಕಾರದಿಂದ ಇಲಾಖೆಗೆ ಸಾಕಷ್ಟು ಹಣ ಒದಗಿಸುವ ಮೂಲಕ ಮೀನುಗಾರರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ, ಅಭಿವೃದ್ಧಿಗೆ ಒತ್ತಾಸೆ ಕೊಡಬೇಕು ಎಂದರು.

Advertisement

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಪವರ್‌ಹೌಸ್‌ ಉದ್ಘಾಟಿಸಿ, ಮೀನುಗಾರರ ಬೇಡಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು, ದೋಣಿಯಲ್ಲಿ ದುಡಿಯುವ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕು, ವಿಮೆ ಇಲ್ಲದೆ ಮುಳುಗಡೆಯಾದಾಗ ದೋಣಿಗಳ ಸಹಾಯಕ್ಕೆ ಸರಕಾರ ಬರಬೇಕು ಎಂದರು.

ವಿವಿಧ ಘಟಕ ಉದ್ಘಾಟನೆ
ಹೈದರಾಬಾದ್‌ ನ್ಯಾಶನಲ್‌ ಫಿಶರೀಸ್‌ ಡೆವಲಪ್‌ಮೆಂಟ್‌ ಬೋರ್ಡ್‌ನ ಸಿಇಒ ಡಾ| ಎಲ್‌. ನರಸಿಂಹ ಮೂರ್ತಿ ಎಆರ್‌ಎಸ್‌ ಮೀನು ಹರಾಜು ಪ್ರಾಂಗಣ, ಉಚ್ಚಿಲ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಆಡಳಿತ ಕಚೇರಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಕಚೇರಿ, ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್‌ ಮೀನಿನ ಸ್ಟಾಲ್‌, ಬ್ಯಾಂಕ್‌ ಆಫ್‌ ಬರೋಡ ರೀಜನಲ್‌ ಮ್ಯಾನೇಜರ್‌ ಸನಾತನ್‌ ಸಾತ್ವ ಲಿಫ್ಟ್‌, ಉಡುಪಿಯ ಕಾಂಚನ ಹ್ಯುಂಡೈ ಎಂಡಿ ಪ್ರಸಾದ್‌ರಾಜ್‌ ಕಾಂಚನ್‌ ವಿದ್ಯುತ್‌ ವಾಹನ ಚಾರ್ಜಿಂಗ್‌ ಕೇಂದ್ರವನ್ನು ಉದ್ಘಾಟಿಸಿದರು.

ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶ್‌ ಕಲ್ಲೇರ, ಗಣ್ಯರಾದ ಆನಂದ ಸಿ. ಕುಂದರ್‌, ಹರಿಯಪ್ಪ ಕೋಟ್ಯಾನ್‌, ಆನಂದ ಪಿ. ಸುವರ್ಣ, ದೇವದಾಸ್‌ ಸಾಲ್ಯಾನ್‌, ರಮೇಶ್‌ ಕಾಂಚನ್‌, ನಕ್ವ ಯಾಹಿಯಾ, ಗೋಪಾಲ್‌ ಸಿ. ಬಂಗೇರ, ನಗರಸಭಾ ಸದಸ್ಯೆ ಎಡ್ಲಿನ್‌ ಕರ್ಕಡ, ವಿವಿಧ ಮೀನುಗಾರ ಸಂಘಟನೆಗಳ ಪದಾಧಿಕಾರಿಗಳು, ಭಜನ ಮಂದಿರಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸಮ್ಮಾನ
ಸಚಿವ ಮಂಕಾಳ ವೈದ್ಯ ಮತ್ತು ಡಾ| ಜಿ. ಶಂಕರ್‌ ಅವರನ್ನು ಸಮ್ಮಾನಿಸಲಾಯಿತು. ಮೂವರು ಮೀನುಗಾರ ಕುಟುಂಬಗಳಿಗೆ ಸಂಕಷ್ಟ ಪರಿಹಾರ ನಿಧಿ ವಿತರಿಸಲಾಯಿತು.

ರತ್ನಾಕರ ಸಾಲ್ಯಾನ್‌ ಸ್ವಾಗತಿಸಿ, ಸತೀಶ್ಚಂದ್ರ ಶೆಟ್ಟಿ ವಂದಿಸಿದರು. ವಿನಯ ಕರ್ಕೇರ ಪ್ರಸ್ತಾವನೆಗೈದರು.

ವಾರಾಂತ್ಯ ಮೀನು ಮೇಳ
ವಿನಯ ಕರ್ಕೇರ ಪ್ರಸ್ತಾವನೆಗೈದು, ದೇಶದಲ್ಲಿಯೇ ಪ್ರಥಮ ಬಾರಿ ಎಂಬಂತೆ ಖಾಸಗಿ ಸಹಭಾಗಿತ್ವದಲ್ಲಿ ಮಲ್ಪೆಯಲ್ಲಿ ಆಧುನಿಕ ಸುಸಜ್ಜಿತ ರಖಂ ಮೀನು ಮಾರುಕಟ್ಟೆ ನಿರ್ಮಾಣಗೊಂಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅವರಿಗೆ ಉತ್ತಮ ಜಾತಿಯ ಮೀನು ಲಭಿಸಲಿದೆ. ಜತೆಗೆ ಸಸ್ಯಾಹಾರಿ ಹೊಟೇಲು, ಹೆಚ್ಚುವರಿ ಮೀನು ಬಂದಾಗ ಶೇಖರಿಸಲು ಶೈತ್ಯಾಗಾರ ಘಟಕ, ಸುಸಜ್ಜಿತ ಸ್ನಾನಗೃಹ, ಶೌಚಾಲಯ ಇತ್ಯಾದಿ ಸೌಲಭ್ಯಗಳಿವೆ. ವಾರಾಂತ್ಯದಲ್ಲಿ ಮೀನು ಖಾದ್ಯ ಮೇಳ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next