Advertisement

ಪಿಕೆಜಿಬಿ ವ್ಯವಸ್ಥಾಪಕರ ಮೇಲೆ ದೂರು

12:41 PM Jan 22, 2022 | Team Udayavani |

ಸುರಪುರ: ಕೋವಿಡ್‌ನಿಂದ ಮೃತಪಟ್ಟಿದ್ದ ಕುಟುಂಬದವರಿಗೆ ನೀಡಿದ್ದ ಪರಿಹಾರದ ಚೆಕ್‌ ಕ್ಲೀಯರ್‌ ಆಗದೆ ಗೊಂದಲ ಸೃಷ್ಟಿಸಿತ್ತು. ಈ ಬಗ್ಗೆ ಸರಿಯಾದ ಮಾಹಿತಿ ಇರದೆ ಫಲಾನುಭವಿಗಳಿಗೆ ಅಲೆ ದಾಡಿಸಿದ್ದಲ್ಲದೆ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ವ್ಯವಸ್ಥಾಪಕರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ತಿಳಿಸಿದರು.

Advertisement

ತಹಶೀಲ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಬ್ಯಾಂಕ್‌ ವ್ಯವಸ್ಥಾಪಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್‌ನಿಂದ ಮೃತಪಟ್ಟಿರುವ ಕುಟುಂಬಗಳಿಗೆ ಪರಿಹಾರದ ಚೆಕ್‌ ನೀಡಲಾಗಿದೆ. ಪಿಕೆಜಿಬಿ 10 ಚೆಕ್‌ ಹೊರತುಪಡಿಸಿ ಉಳಿದ ಬ್ಯಾಂಕ್‌ ಚೆಕ್‌ಗಳು ಕ್ಲೀಯರ್‌ ಆಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿದೆ. ಆದರೆ ಪಿಕೆಜಿಬಿ ವ್ಯವಸ್ಥಾಪಕರು ಕ್ಲೀಯರನ್ಸ್‌ ಬಗ್ಗೆ ಸರಿಯದ ಮಾಹಿತಿ ಇರದೆ ಫಲಾನುಭವಿಗಳಿಗೆ ತಪ್ಪು ಮಾಹಿತಿ ನೀಡಿ ವ್ಯರ್ಥವಾಗಿ ಅಲೆದಾಡಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು.

ಡಿ.17ರಂದು 10 ಜನರಿಗೆ, ಡಿ.24ರಂದು 12 ಜನರು ಸೇರಿ ಒಟ್ಟು 22 ಜನ ಫಲಾನುಭವಿಗಳಿಗೆ ಶಾಸಕರಿಂದ ಚೆಕ್‌ ವಿತರಿಸಲಾಗಿತ್ತು. ಸರಕಾರದ ಚೆಕ್‌ ಆಗಿರುವುದರಿಂದ ಬೌನ್ಸ್‌ ಆಗುವ ಮಾತೇ ಇಲ್ಲ. ಬೌನ್ಸ್‌ ಆಗಿದೆ ಎಂಬ ಸುದ್ದಿ ಆಘಾತ ನೀಡಿದೆ. ವ್ಯವಸ್ಥಾಪಕರ ಅಜಾಗುರುಕತೆಯಿಂದ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಕೆಟ್ಟ ಹೆಸರು ತಂದಂತಾಗಿದೆ. ಜಿಲ್ಲಾಡಳಿತದ ನಿರ್ದೇಶನ ಮೇರೆಗೆ ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿ ನಿರ್ಲಕ್ಷವಹಿಸಿದ ಆರೋಪದ ಮೇಲೆ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸರಕಾರಿ ಚೆಕ್‌ಗಳನ್ನು ಈ ಹಿಂದೆ ಟಿಎಸ್‌ಎಲ್‌ ಮೂಲಕ ಜಮೆ ಮಾಡಲಾಗುತ್ತಿತ್ತು. ಹೊಸ ನಿಯಮಗಳ ಬಗ್ಗೆ ಮಾಹಿತಿ ಇರಲಿಲ್ಲ. ಇತರೆ ಕಾರಣ ನೀಡಿ ಚೆಕ್‌ ವಾಪಸ್‌ ನೀಡಿದ್ದೇನೆ ಹೊರತು ಚೆಕ್‌ ಬೌನ್ಸ್‌ ಆಗಿದೆ ಅಂತ ಯಾರಿಗೂ ಹೇಳಿಲ್ಲ. ಈಗ ಮಾಹಿತಿ ಪಡೆದಿದ್ದೇನೆ. ಎಲ್ಲ ಚೆಕ್‌ಗಳನ್ನು ಕ್ಲೀಯರ್‌ ಮಾಡಿ ಫಲಾನುಭವಿ ಖಾತೆಗೆ ಜಮೆ ಮಾಡಿಕೊಡುತ್ತೇನೆ ಎಂದು ಪಿಕೆಜಿಬಿ ವ್ಯವಸ್ಥಾಪಕ ಪಿ.ಸಿ. ಚವ್ಹಾಣ ತಹಶೀಲ್ದಾರರಿಗೆ ತಿಳಿಸಿದರು.

ಕೆನರಾ, ಎಸ್‌ಬಿಐ, ಎಡಿಬಿ ಸೇರಿದಂತೆ ಇತರೆ ಬ್ಯಾಂಕ್‌ ವ್ಯವಸ್ಥಾಪಕರು ಪಿಐ ಸುನೀಲಕುಮಾರ ಮೂಲಿಮನಿ ಇದ್ದರು.

Advertisement

ಶಿಸ್ತು ಕ್ರಮಕ್ಕೆ ಶಾಸಕರ ಆಗ್ರಹ ಸುರಪುರ

ಕೋವಿಡ್‌ ಪರಿಹಾರ ಚೆಕ್‌ ಕ್ಲೀಯರನ್ಸ್‌ ಮಾಡಿದೆ ಫಲಾನುಭವಿಗಳಿಗೆ ತಪ್ಪು ಮಾಹಿತಿ ನೀಡಿ ಅನಗತ್ಯವಾಗಿ ಅಲೆದಾಡಿಸಿದ್ದಲ್ಲೇ ಸರಕಾರಕ್ಕೆ ಕೆಟ್ಟ ಹೆಸರು ತಂದ ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಾಸಕ ರಾಜುಗೌಡ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಮಹಾಮಾರಿ ರೋಗದಿಂದ ಮೃತಪಟ್ಟ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ನಮ್ಮ ಸರಕಾರ ಪರಹಾರ ನೀಡಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬದವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವಾಗ ಬ್ಯಾಂಕ್‌ನವರು ಈ ರೀತಿ ನಿರ್ಲಕ್ಷ್ಯ ವಹಿಸಿ ಸಂತ್ರಸ್ತ ಕುಟುಂಬದವರೊಂದಿಗೆ ಚಲ್ಲಾಟ ಆಡುವುದು ಸರಿಯಲ್ಲ. ಅವರು ಯಾರೇ ಆಗಿರಲಿ ನಿರ್ಲಕ್ಷ್ಯ ವಹಿಸಿದ ವ್ಯವಸ್ಥಾಪಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next