ಶಹಾಬಾದ: ನಗರದ ಜಿಇ ಕಾರ್ಖಾನೆಯ ಕಾರ್ಮಿಕ ಮುಖಂಡರ ನಿಯೋಗ ಗುರುವಾರ ಕಲಬುರಗಿ ಉಪ ಕಾರ್ಮಿಕ ಆಯುಕ್ತರನ್ನು ಭೇಟಿ ಮಾಡಿ ಕಂಪನಿಯು ಕಾರ್ಮಿಕರ ಮೇಲೆ ನಡೆಸುತ್ತಿರುವ ಶೋಷಣೆ ಬಗ್ಗೆ ದೂರು ಸಲ್ಲಿಸಿತು.
ನಂತರ ಮಾತನಾಡಿದ ಜಿಲ್ಲಾ ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ, ಯಾವುದೇ ಮುನ್ಸೂಚನೆಯಿಲ್ಲದೇ ನಗರದ ಬಹುರಾಷ್ಟ್ರೀಯ ಜನರಲ್ ಇಲೆಕ್ಟ್ರಿಕಲ್ (ಜಿಇ) ಕಾರ್ಖಾನೆ ಆಡಳಿತ ಮಂಡಳಿ ಸೋಮವಾರ ಕಾನೂನು ಬಾಹಿರವಾಗಿ
ಕಾರ್ಖಾನೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಿ, ಕಾರ್ಮಿಕರನ್ನು ಬೀದಿಗೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಕಾರ್ಖಾನೆಯ 86 ಕಾರ್ಮಿಕರಲ್ಲಿ 33 ಜನರಿಗೆ ಹಣದ ಆಸೆ ತೋರಿಸಿ ಹೊರಹಾಕಿದ್ದಾರೆ.
ಸ್ವಯಂ ನಿವೃತ್ತಿ ಯೋಜನೆ ಮೂಲಕ 176 ಜನ ತಾತ್ಕಾಲಿಕ ಕಾರ್ಮಿಕರನ್ನು ಹಾಗೂ ಉಳಿದ 53ಜನ ಶಾಶ್ವತ ಕಾರ್ಮಿಕರನ್ನು ಹೊರಹಾಕಲು ಮುಂದಾಗಿರುವುದಕ್ಕೆ ಕಾರ್ಮಿಕ ಮುಖಂಡರು ವಿರೋಧ ವ್ಯಕ್ತಡಿಸಿ, ಸಹಾಯಕ ಕಾರ್ಮಿಕ ಆಯುಕ್ತರಿಗೂ ದೂರು ಸಲ್ಲಿಸಿದ್ದರು. ದೂರಿಗೆ ಸಂಬಂಧಿ ಸಿದಂತೆ ಸಹಾಯಕ ಕಾರ್ಮಿಕ ಆಯುಕ್ತರು ಮೇ 26 ರಂದು ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಯವರಿಗೆ ಸಭೆ ನಿಗದಿಪಡಿಸಿದ್ದರು. ಆದರೆ ಹಠಾತ್‌ನೆ ಕಂಪನಿಯ ಗೇಟ್ ಬಂದ್ ಮಾಡಿ, ಕಾರ್ಮಿಕರನ್ನು ಶೋಷಿಸುವ ಮೂಲಕ ಪರೋಕ್ಷವಾಗಿ ಬಿಟ್ಟು ಹೋಗುವಂತೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ದೂರು ಸ್ವೀಕರಿಸಿದ ಉಪ ಕಾರ್ಮಿಕ ಆಯುಕ್ತರು, ಶೀಘ್ರವೇ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಮಿಕ ಮುಖಂಡ ಸತ್ಯನಾರಾಯಣ ಜೋಷಿ, ಮಹಾದೇವ ಮಾನಕರ್, ಭೀಮರಾಯ ಸಿರಗೊಂಡ, ದಾವೂದ್ ಹುಸೇನ್, ಜಿ.ರಮೇಶ, ಶರಣು ಪಾಟೀಲ, ಸುಧಾಕರ, ಸೂರ್ಯಕಾಂತ ಕಲಾಲ, ನಿಂಗಣ್ಣ ಕಾರೊಳ್ಳಿ, ಸ್ಟಾನಿಲಿ, ಜಾನ್, ಮಹೇಶ ಹೀರಾಳ ಹಾಗೂ ಇನ್ನಿತರ ಕಾರ್ಮಿಕರು ಇದ್ದರು.