ಬೆಂಗಳೂರು: ಬಸ್‌ಗಳ ಖರೀದಿ ಹಾಗೂ ಅವುಗಳ ನಿರ್ವಹಣೆ ಹೆಸರಿನಲ್ಲಿ 1,577 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮತ್ತು ಸಾರಿಗೆ ಸಂಸ್ಥೆಗಳ ಹಿರಿಯ ಅಧಿಕಾರಿಗಳ ವಿರುದ್ಧ ಬಿಜೆಪಿ ನಗರ ಘಟಕದ ವಕ್ತಾರ ಎನ್.ಆರ್.ರಮೇಶ್ ಶುಕ್ರವಾರ ಎಸಿಬಿಗೆ ದೂರು ನೀಡಿದ್ದಾರೆ.
ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ಬಸವರಾಜು, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್ ಉಮಾಶಂಕರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್, ಎನ್.ಇ.ಕೆ.ಆರ್.ಟಿ.ಸಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್ ಅಶೋಕ್ ಆನಂದ್, ಎನ್‌ಡಬುಕೆಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಬೊಮ್ಮಯ್ಯ ನಾಯ್ಕ ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಚಿವ ರೇವಣ್ಣ ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿ ಕೇವಲ ಆರೂವರೆ ತಿಂಗಳಾಗಿದ್ದು, ನಂತರ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ , ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗಳಿಗೆ ಬಸ್‌ಗಳನ್ನು ಖರೀದಿಸುವ ಸಲುವಾಗಿ 970 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ.
ಇತರೆ ವಾಹನ ನಿರ್ವಹಣೆ ಮತ್ತು ದುರಸ್ಥಿ ಕಾರ್ಯಗಳಿಗೆಂದು 607 ಕೋಟಿ ರೂ.ಗೂ ಅಧಿಕ ಹಣ ಬಳಸಿಕೊಳ್ಳಲಾಗಿದೆ. ಒಟ್ಟಾರೆ ಬಸ್ ಖರೀದಿ ಮತ್ತು ನಿರ್ವಹಣೆಗೆ 1,577 ಕೋಟಿ ವ್ಯಯಿಸಲಾಗಿದೆ. ಈ ಹಣದಲ್ಲಿ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸುವಂತೆ ದೂರಿನಲ್ಲಿ ರಮೇಶ್ ಒತ್ತಾಯಿಸಿದ್ದಾರೆ.
ಲೋಕಾಯುಕ್ತಕ್ಕೂ ದೂರು: ಇದೇ ವೇಳೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಂಸ್ಥೆಗಳ ಬಳಕೆಗೆಂದು ಇತ್ತೀಚೆಗೆ ಸ್ವೀಡನ್ ದೇಶದ ಸ್ಕ್ಯಾನಿಯಾ ಹೆಸರಿನ 300ಕ್ಕೂ ಅಧಿಕ ಬಸ್‌ಗಳನ್ನು ಖರೀದಿಸಿರುವ ಪ್ರಕ್ರಿಯೆಗಳಲ್ಲೂ ಅವ್ಯವಹಾರ ನಡೆದಿದೆ. ಶೇ.75 ರಷ್ಟು ಪ್ರಮಾಣದ ಬಸ್‌ಗಳಲ್ಲಿ ಸಾಕಷ್ಟು ತೊಂದರೆ ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸಚಿವರು ಹಾಗೂ ಐವರು ಅಧಿಕಾರಿಗಳ ವಿರುದ್ಧ ಬಿ.ಗಣೇಶ್ ಸಿಂಗ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.