Advertisement

ಸಂಭಾಜಿ ಸಾವಿನ ಸತ್ಯಾಂಶ ತಿಳಿಯಲು ಪುತ್ರಿ ದೂರು

11:42 PM May 18, 2019 | Team Udayavani |

ಬೆಳಗಾವಿ: ಮಾಜಿ ಶಾಸಕ, ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡ ಸಂಭಾಜಿ ಪಾಟೀಲ ಅವರ ಸಾವು ಸಹಜವಲ್ಲ, ಅಸ್ವಾಭಾವಿಕ ಎಂದು ಅವರ ಪುತ್ರಿ ಸಂಧ್ಯಾ ನಿತೀನ ಪೇರನೂರಕ ದೂರು ದಾಖಲಿಸಿದ್ದಾರೆ.

Advertisement

ಶುಕ್ರವಾರ ಸಂಜೆ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಸಂಭಾಜಿ ಪಾಟೀಲ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಆದರೆ ಸಾವಿನ ನಿಖರ ಕಾರಣ ತಿಳಿಯಬೇಕಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಬೇಕು. ತಂದೆಯ ಸಾವಿಗೆ ಸಂಬಂಧಿಸಿದಂತೆ ಯಾರ ಮೇಲೂ ನಮಗೆ ಸಂಶಯ ಇಲ್ಲ ಎಂದು ಮಗಳು ಭಾಗ್ಯನಗರದ ಸಂಧ್ಯಾ ಪೇರನಕೂರ ಅವರು ದೂರು ದಾಖಲಿಸಿದ್ದಾರೆ.

ಸಂಭಾಜಿ ಅವರ ಏಕೈಕ ಪುತ್ರ ಸಾಗರ ಪಾಟೀಲ, 2018ರ ಡಿ.4ರಂದು ಬೆಂಗಳೂರಿನಿಂದ ವಾಪಸ್ಸಾಗುವಾಗ ರೈಲು ಅಪಘಾತದಲ್ಲಿ ಮೃತಪಟ್ಟಿದ್ದರು. ಮಗನ ಸಾವಿನಿಂದಲೂ ಸಂಭಾಜಿ ಪಾಟೀಲ ತೀವ್ರ ನೊಂದಿದ್ದರು. ಮಗ ಸಾಗರನ ಪತ್ನಿ ಕೆಲ ವರ್ಷಗಳ ಹಿಂದೆಯೇ ಪತಿಯನ್ನು ತೊರೆದು ಮಹಾರಾಷ್ಟ್ರದ ಸಾಂಗಲಿಯಲ್ಲಿರುವ ತವರು ಮನೆಯಲ್ಲಿ ವಾಸಿಸುತ್ತಿದ್ದು, ಸಂಭಾಜಿ ಪಾಟೀಲ ವಿರುದ್ಧ ಸೊಸೆ ದೂರು ನೀಡಿದ್ದರು.

ಒಂದೆಡೆ ಪುತ್ರನ ಸಾವು, ಇನ್ನೊಂದೆಡೆ ಸೊಸೆ ನೀಡಿದ ದೂರಿನಿಂದಾಗಿ ಸಂಭಾಜಿ ತೀವ್ರ ನೊಂದಿದ್ದರು ಎಂದು ಹೇಳಲಾಗುತ್ತಿದೆ. ತಾಲೂಕಿನ ಬೆನಕನಹಳ್ಳಿಯಲ್ಲಿದ್ದ ಜಮೀನನ್ನು ಸಂಭಾಜಿ ಪಾಟೀಲ ಮಾರಾಟ ಮಾಡಿದ್ದರು. ಈ ಭೂವಿವಾದ ಹಾಗೂ ಕೌಟುಂಬಿಕ ಕಲಹದ ಮಧ್ಯೆಯೇ ಸಂಭಾಜಿ ಪಾಟೀಲ ನಿಧನರಾಗಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next