ಕಡಬ : ಕಡಬ ತಾಲೂಕಿನ ಐತ್ತೂರು ಗ್ರಾಮದ ಅಂತಿಬೆಟ್ಟು ನಿವಾಸಿ ಚೇತನ್ ತನ್ನೂರಿನ ದುರ್ಬಲ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯ ಕುರಿತು ಮೋದಿ ಆ್ಯಪ್‌ನಲ್ಲಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳ ಸೂಚನೆಯಂತೆ ಖಾಸಗಿ ಮೊಬೈಲ್ ಕಂಪೆನಿ (ಏರ್‌ಟೆಲ್) ಅಧಿಕಾರಿ ಆದಿಲ್ ಪಾಷಾ ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಆದಿಲ್ ಪಾಷಾ ಹಾಗೂ ಅವರ ಜೊತೆಗಿದ್ದ ತಾಂತ್ರಿಕ ಅಧಿಕಾರಿಗಳು ಮೂಜೂರು ಕಟ್ಟದಲ್ಲಿರುವ ತಮ್ಮ ಕಂಪೆನಿಯ ಮೊಬೈಲ್ ಟವರ್ ಬಳಿ ತೆರಳಿ ಇಂಟರ್ನೆಟ್ ಸಾಮರ್ಥಯದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮೂಜೂರುಕಟ್ಟ ಟವರ್‌ಗೆ 4ಜಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಂಪೆನಿಯ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿರುವ ಆದಿಲ್ ಪಾಷಾ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಈ ಸಂದರ್ಭದಲ್ಲಿ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.
ಐತ್ತೂರು ಗ್ರಾ.ಪಂ. ಸದಸ್ಯ ಎ.ಪಿ. ಯೂಸುಫ್, ಇಸ್ಮಾಯಿಲ್ ಎಂ.ಎಚ್., ಲೋಕೇಶ್ ಅಂತಿಬೆಟ್ಟು, ರೋಹಿತ್ ಅಂತಿಬೆಟ್ಟು, ನವೀನ್ ಕಲ್ಲಾಜೆ, ಚರಣ್, ಆಸಿರ್ ಕಲ್ಲಾಜೆ, ರಮೇಶ್ ಅಂತಿಬೆಟ್ಟು, ಉದಯ ಕುಮಾರ್ ಅಂತಿಬೆಟ್ಟು, ರಾಮಣ್ಣ ಗೌಡ ಅಂತಿಬೆಟ್ಟು, ಪುನೀತ್ ಕಲ್ಲಾಜೆ, ಜಾಬಿರ್ ಕಲ್ಲಾಜೆ, ಧನಂಜಯ, ದೇವಕಿ, ಪುಷ್ಪಾವತಿ, ಧರ್ಮಪಾಲ ಅಂತಿಬೆಟ್ಟು ಮತ್ತಿತರರು ಅಧಿಕಾರಿಗಳಿಗೆ ಸಮಸ್ಯೆಯ ಕುರಿತು ಮನವರಿಕೆ ಮಾಡಿದರು.
ಮೋದಿ ಆ್ಯಪ್‌ನಲ್ಲಿ ಅ. 1ರಂದು ದೂರು ದಾಖಲಿಸಿದ್ದ ಚೇತನ್ ಅವರು ತನ್ನ ಗ್ರಾಮವಾದ ಐತ್ತೂರಿನಲ್ಲಿ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್ನೆಟ್ ಸೇವೆ ಸಮರ್ಪಕವಾಗಿ ಸಿಗದಿರುವ ಬಗ್ಗೆ ಪ್ರಸ್ತಾವಿಸಿದ್ದರು. ಅದರಂತೆ ಅ. 6ರಂದು ಚೇತನ್ ಅವರನ್ನು ಸಂಪರ್ಕಿಸಿದ ಬಿಎಸ್ಸೆನ್ನೆಲ್ ಮಂಗಳೂರು ಕಚೇರಿಯ ಅಧಿಕಾರಿಗಳು ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡು ಶೀಘ್ರದಲ್ಲಿ ಕಂಪೆನಿಯ ತಾಂತ್ರಿಕ ಅಧಿಕಾರಿಗಳು ಐತ್ತೂರಿಗೆ ಭೇಟಿ ನೀಡಿ ಅಗತ್ಯ ಸಮೀಕ್ಷೆ ನಡೆಸಲಿದ್ದಾರೆ ಎಂದು ಭರವಸೆ ನೀಡಿದ್ದರು. ಏರ್‌ಟೆಲ್ ಮೊಬೈಲ್ ಕಂಪೆನಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಮೂಲಕ ಸಮಸ್ಯೆ ಬಗೆಹರಿಯುವ ಆಶಾಭಾವನೆ ಸ್ಥಳೀಯರಲ್ಲಿ ಮೂಡಿದೆ.