ಯಾದಗಿರಿ: ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾದವರು ಹೆದರದೇ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಬೇಕು ಎಂದು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಅಧ್ಯಕ್ಷ ನ್ಯಾಯಮೂರ್ತಿ ಎ.ಎಸ್. ಪಾಚ್ಛಾಪುರೆ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ರಚನೆ ಬಗ್ಗೆ ಜಾಗೃತಿ ಮೂಡಿಸುವ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಸಾರ್ವಜನಿಕರು ಬಂದರೆ ವಕೀಲರು ಈ ಕುರಿತು ಜಾಗೃತಿ ಮೂಡಿಸಬೇಕು.
ಸಾರ್ವಜನಿಕರು ಸಹ ತಮ್ಮ ಹಕ್ಕುಗಳ ಕುರಿತು ಅರಿಯುವುದು ಅವಶ್ಯಕವಾಗಿದೆ ಎಂದರು.
2012ರಲ್ಲಿ ಕರ್ನಾಟಕದಲ್ಲಿ ಪೊಲೀಸ್ ದೂರು ಪ್ರಾಧಿಕಾರವನ್ನು ರಚನೆ ಮಾಡಲಾಗಿದ್ದು, ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಎಸ್.ಪಿ ಯಿಂದ ಡಿ.ಜಿ.ಪಿ ವರೆಗಿನ ಪೊಲೀಸ್ ಅಧಿಕಾರಿಗಳ ಗಂಭೀರ ದುರ್ನಡತೆ ಕುರಿತು ದೂರು ಬಂದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ ಎಂದರು. ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಪೊಲೀಸ್ ಪೇದೆಯಿಂದ ಡಿ. ಎಸ್.ಪಿ ವರೆಗಿನ ಅಧಿಕಾರಿಗಳ ವಿರುದ್ಧದ ಗಂಭೀರ ದುರ್ನಡತೆ ಅಂದರೆ ಲಾಕಪ್ ಡೆತ್, ಅಕ್ರಮ ಬಂಧನ ಸೇರಿದಂತೆ ಇನ್ನಿತರ ದೂರುಗಳಿದ್ದರೆ ಜಿಲ್ಲಾ ಮಟ್ಟದಲ್ಲಿ ದೂರು ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸದಸ್ಯ ಕಾರ್ಯ ದರ್ಶಿಯಾಗಿರುತ್ತಾರೆ ಎಂದರು.
ಇದಕ್ಕೂ ಮೊದಲು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವಲೀಲಾ ಅಕ್ಕ ಅವರಿಂದ ಆಧ್ಯಾತ್ಮದ ಕುರಿತು ಉಪನ್ಯಾಸ ನೆರವೇರಿತು. ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಸದಾನಂದ ಎನ್. ನಾಯಕ್, ಸಿವಿಲ್ ನ್ಯಾಯಾಧೀಶ ಪ್ರಭು ಎನ್. ಬಡಿಗೇರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಭೀಮ ರಾಯಾ ಕಿಲ್ಲನಕೇರಿ, ಪ್ರಭಾರಿ ಜಿಲ್ಲಾಧಿಕಾರಿ ಡಾ| ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ್ ವೇದಿಯಲ್ಲಿದ್ದರು. ಅಮೃತ ಶೆಟ್ಟಿ ಪ್ರಾರ್ಥಿಸಿದರು. ಚಂದ್ರಶೇಖರ ಅಲ್ಲಿಪುರ ಸ್ವಾಗತಿಸಿದರು. ನಿರಂಜನ್ ಯರಗೋಳ ನಿರೂಪಿಸಿದರು.
ಜನರಿಗೆ ಅರಿವು ಮೂಡಿಸಲು ಆದ್ಯತೆ
ಪೊಲೀಸ್ ಪ್ರಾಧಿಕಾರಕ್ಕೆ ದೂರು ನೀಡುವ ಕುರಿತು ಜನತೆಗೆ ವ್ಯಾಪಕ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು.
ಎಂ.ಆರ್. ಕಾಂಬ್ಳೆ, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ