ಬೆಂಗಳೂರು: ಕುಮಾರಕೃಪಾ ರಸ್ತೆಯಲ್ಲಿರುವ ಐಶಾರಾಮಿ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ವಾಸ್ತವ್ಯವಿದ್ದು, ಬಿಲ್ ಬಾಕಿ ಉಳಿಸಿಕೊಂಡ ಆರೋಪ ಸಂಬಂಧ ನಟಿ ಪೂಜಾಗಾಂಧಿ ಹಾಗೂ ಅನಿಲ್ ಪಿ. ಮೆಣಸಿನಕಾಯಿ ಎಂಬಾತನ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎನ್‌ಸಿಆರ್ (ಅಸಂಜ್ಞೆಯ) ದೂರು ಮುಕ್ತಾಯಗೊಂಡಿದೆ.
ಬಾಕಿ ಮೊತ್ತವನ್ನು ಆರೋಪಿತರಲ್ಲಿ ಒಬ್ಬರಾದ ಅನಿಲ್ ಪಿ. ಮೆಣಸಿನಕಾಯಿ, ಹೋಟೆಲ್ ಆಡಳಿತ ಮಂಡಳಿಗೆ ಪಾವತಿಸಿದ್ದು, ರಾಜಿಸಂಧಾನದ ಮೂಲಕ ಬಗೆಹರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದಾಖಲಾಗಿದ್ದ ಎನ್‌ಸಿಆರ್ ಮುಕ್ತಾಯಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ನಟಿ ಪೂಜಾಗಾಂಧಿ ಹಾಗೂ ಅನಿಲ್ ಪಿ ಮೆಣಸಿನಕಾಯಿ ಅವರು 2016ರ ಏಪ್ರಿಲ್‌ನಿಂದ 2017ರ ಮಾರ್ಚ್‌ವರೆಗೆ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, 26,83,129 ರೂ. ಮೊತ್ತ ಬಾಕಿ ಉಳಿಸಿಕೊಂಡಿದ್ದರು (ತೆರಿಗೆ ಸೇರಿ). ಈ ಪೈಕಿ ಕಳೆದ ವರ್ಷ ಡಿಸೆಂಬರ್ ಅಂತ್ಯಕ್ಕೆ 22,83,129. ಪಾವತಿಸಿದ್ದು, ಉಳಿದ 3.53. ಲಕ್ಷ ರೂ. ಬಾಕಿ ಉಳಿಸಿದ್ದರು.
ಬಾಕಿ ಮೊತ್ತ ಪಾವತಿಸುವಂತೆ ಅನಿಲ್ ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಪೂಜಾಗಾಂಧಿ ಅವರಿಗೆ ಕರೆ ಮಾಡಿದರೆ, ಅನಿಲ್ ಅವರನ್ನು ಸಂಪರ್ಕಿಸಿ ಎಂದು ಹೇಳುತ್ತಿದ್ದರು. ಹೀಗಾಗಿ ಉದ್ದೇಶಪೂರ್ವಕವಾಗಿ ವಂಚಿಸಿದ ಇಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಲಲಿತ್ ಅಶೋಕ್ ಸಿಬ್ಬಂದಿ ಮಾ.11ರಂದು ದೂರು ನೀಡಿದ್ದರು.
ಈ ಕುರಿತು ಎನ್‌ಸಿಆರ್ ದೂರು ದಾಖಲಿಸಿಕೊಂಡ ಪೊಲೀಸರು, ಬಾಕಿ ಮೊತ್ತ ಪಾವತಿ ಬಗ್ಗೆ ತನಿಖೆ ನಡೆಸಿ ಪೂಜಾಗಾಂಧಿ ಹಾಗೂ ಅನಿಲ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಅನಿಲ್, ಬಾಕಿ ಮೊತ್ತವನ್ನು ಹೋಟೆಲ್‌ನವರಿಗೆ ಪಾವತಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.