ಬೆಂಗಳೂರು: “ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿ ಹಿಂದಿ ನಾಮಫಲಕಗಳ ಅಳವಡಿಸಿರುವ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಅ ಹಾಗೂ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ವಿರುದ್ಧ ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ ಪ್ರಸಾದ್ ಮಂಗಳವಾರ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆದರೆ, ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿಲ್ಲ. ಬದಲಿಗೆ, ಪ್ರಕರಣ ಸಂಬಂಧ ಸೂಕ್ತ ಸಲಹೆ ನೀಡುವಂತೆ ಕಾನೂನು ತಜ್ಞರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಮಂಡಳಿಯ ದೂರಿನಲ್ಲಿರುವ ಅಂಶಗಳು ಶಿಸ್ತು ಕ್ರಮಕ್ಕೆ ಮಾತ್ರ ಒಳಪಡುತ್ತವೆ. ಕಾನೂನು ಕ್ರಮದ ವ್ಯಾಪ್ತಿಗೆ ಬರುವುದಿಲ್ಲ. ಈ ಹಿನ್ನೆಲೆಯೆಲ್ಲಿ ಕಾನೂನು ತಜ್ಞರಿಂದ ಸಲಹೆ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ.
ದೂರಿನಲ್ಲೇನಿದೆ?: “ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿ ತ್ರಿಭಾಷಾ ಸೂತ್ರ ಪಾಲನೆ ಮಾಡಿರುವ ವಿಚಾರ ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಅ ಅವರ ಗಮನಕ್ಕೆ ಬಂದರೂ ಯಾವುದೇ ಕ್ರಮಕೈಗೊಂಡಿಲ್ಲ. ಅಲ್ಲದೇ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ನಾಮಫಲಕವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರದೇ ಅಳವಡಿಸಿದ್ದಾರೆ.
ಈ ಮೂಲಕ ಕನ್ನಡ ಭಾಷೆಗೆ ಬಿಎಂಆರ್‌ಸಿಎಲ್ ಅಗೌರವ ತೋರಿದೆ. ಹಿಂದಿ ನಾಮಫಲಕ ಅಳವಡಿಸಿ ಭಾಷಾ ವೈಷಮ್ಯದ ಕಿಚ್ಚು ಹಚ್ಚಲು ಮುಂದಾಗಿದೆ. ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಅ ಅವರು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ವಿರುದ್ಧ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ.
ಪ್ರದೀಪ್‌ಸಿಂಗ್ ಕರೋಲ ಸಹ ಹಿಂದಿ ನಾಮಫಲಕ ಅಳವಡಿಕೆ ಸೂಚನೆ ಬಗ್ಗೆ ಈ ವಿಚಾರ ರಾಜ್ಯ ರಾಜ್ಯ ಸರ್ಕಾರದ ಗಮನಕ್ಕೆ ತರಬೇಕಿತ್ತು. ಇವರು ಸಹ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಈ ಇಬ್ಬರು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.