ಬೆಂಗಳೂರು: ವಿಶ್ವಾಸ ಮತ ಯಾಚನೆಗೆ ಹಾಜರಾಗುವಂತೆ ವಿಪ್ ಜಾರಿ ಮಾಡಿದ್ದರೂ. ರಾಜೀನಾಮೆ ಸಲ್ಲಿಸಿರುವ ಹನ್ನೆರಡು ಶಾಸಕರು ಹಾಗೂ ರಾಜೀನಾಮೆ ಸಲ್ಲಿಸದೇ ಗೈರು ಹಾಜರಾಗಿರುವ ಶ್ರೀಮಂತ ಪಾಟೀಲ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಸ್ಪೀಕರ್‌ಗೆ ಮತ್ತೂಂದು ದೂರು ಸಲ್ಲಿಸಿದ್ದಾರೆ.
ವಿಧಾನಸಭೆಯ ಅಧಿವೇಶನದಲ್ಲಿ ಪ್ರತಿ ದಿನವೂ ಪಾಲ್ಗೊಳ್ಳುವಂತೆ ವಿಪ್ ಜಾರಿಗೊಳಿಸಲಾಗಿತ್ತು. ಆದರೂ. ಶಾಸಕರು ಹಾಜರಾಗದೇ ಸುಪ್ರೀಂ ಕೋರ್ಟ್‌ನಿಂದ ವಿನಾಯಿತಿ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಆ ಕಾರಣದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಯ ದಿನ ಕಡ್ಡಾಯವಾಗಿ ಹಾಜರಿರುವಂತೆ ಎಲ್ಲ ಶಾಸಕರಿಗೆ ಮತ್ತೂಂದು ಬಾರಿ ವಿಪ್ ಜಾರಿಗೊಳಿಸಲಾಗಿತ್ತು. ಆದರೂ ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್‌ನ ಯಾವ ಶಾಸಕರೂ ಸದನಕ್ಕೆ ಹಾಜರಾಗಿರಲಿಲ್ಲ. ಅವರೊಂದಿಗೆ ರಾಜೀನಾಮೆ ಸಲ್ಲಿಸದೇ ಇರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಕೂಡ ಗೈರು ಹಾಜರಾಗಿದ್ದರು.
ಆದರೆ, ಬಿ.ನಾಗೇಂದ್ರ ಹೃದಯ ಸಂಬಂಧಿ ಕಾಯಿಲೆಯಿಂದ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರನ್ನು ಪಕ್ಷದ ನಾಯಕರು ನೇರವಾಗಿ ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಅವರ ವಿರುದ್ಧ ಯಾವುದೇ ಕ್ರಮಕ್ಕೆ ದೂರು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ. ಶ್ರೀಮಂತ ಪಾಟೀಲ್ ಪಕ್ಷ ನೀಡಿರುವ ವಿಪ್ ಪಡೆದುಕೊಂಡು ಸ್ವೀಕೃತಿ ಪತ್ರಕ್ಕೂ ಸಹಿ ಹಾಕಿರುವುದರಿಂದ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಅವರ ಶಾಸಕತ್ವವನ್ನೂ ಅನರ್ಹಗೊಳಿಸುವಂತೆ ಕಾಂಗ್ರೆಸ್ ನಾಯಕರು ಸ್ಪೀಕರ್ ರಮೇಶ್ ಕುಮಾರ್‌ಗೆ ದೂರು ಸಲ್ಲಿಸಿದ್ದಾರೆ.
ಬಿಜೆಪಿಯವರು ಚುನಾಯಿತ ಸರ್ಕಾರವನ್ನು ಉರುಳಿಸಿದೆ. ನಮ್ಮ ಶಾಸಕರನ್ನು ಕರೆದುಕೊಂಡು ಮುಂಬೈನಲ್ಲಿಟ್ಟು ವಾಮ ಮಾರ್ಗದಲ್ಲಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ನಾವು ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಲು ನಿರ್ಧರಿಸಿದ್ದೇವೆ.
-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ.
ಬಿಜೆಪಿಯವರಿಗೆ ಸರ್ಕಾರ ರಚನೆಗೆ ರಾಜ್ಯಪಾಲರು ಹಾಗೂ ಅವರ ವರಿಷ್ಠರು ಅವಕಾಶ ಕೊಟ್ಟಿಲ್ಲ ಎಂಬ ಮಾಹಿತಿ ಇದೆ. ಮೈತ್ರಿ ಪಕ್ಷಗಳು ಎರಡನೇ ಬಾರಿಗೆ ಸರ್ಕಾರ ರಚನೆಗೆ ಅವಕಾಶ ನೀಡುವ ಬಗ್ಗೆ ಮಾಹಿತಿ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕಾದರೆ, ಮೈತ್ರಿ ಅನಿವಾರ್ಯ ಇದೆ.
-ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ನಾಯಕ