ಬೆಂಗಳೂರು: ಕೋವಿಡ್ 19 ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿನ 200 ಗ್ರಂಥಾಲಯಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ತೊಂದರೆಯಾಗಿದೆ. ಇನ್ನೊಂದೆಡೆ ಕೋಚಿಂಗ್ ಸೆಂಟರ್‌ಗಳು ಬಂದ್ ಆಗಿದ್ದು, ದೂರದ ಊರಿನಿಂದ ವ್ಯಾಸಂಗಕ್ಕಾಗಿ ಬಂದವರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಕೆ- ಸೆಟ್, ಪ್ರಥಮ, ದ್ವಿತೀಯ ದರ್ಜೆ ಸಹಾಯಕ ಹುದ್ದೆ, ಶಿಕ್ಷಕರ ಅರ್ಹತಾ ಪರೀಕ್ಷೆ, ಪೊಲೀಸ್ ಕಾನ್ಸ್ ಸ್ಟೇಬಲ್ ಹುದ್ದೆ ನೇಮಕಾತಿ, ಕೆಎಎಸ್ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳಿವೆ. ತರಬೇತಿಗಾಗಿ ಬಳ್ಳಾರಿ, ಕೊಪ್ಪಳ, ಬೀದರ್, ಗದಗ, ಬೆಳಗಾವಿ, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ನಾನಾ ಜಿಲ್ಲೆಗಳಿಂದ ಆಗಮಿಸಿ ಕೋಚಿಂಗ್ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪರೀಕ್ಷಾರ್ಥಿಗಳು ಅತಿ ಹೆಚ್ಚು ಸಮಯವನ್ನು ಸಮೀಪದ ಗ್ರಂಥಾಲಯದಲ್ಲಿ ಓದುವುದಕ್ಕೆ ಮೀಸಲಿಟ್ಟಿದ್ದಾರೆ. ಆದರೀಗ ವೈರಾಣು ಭೀತಿ ಗ್ರಂಥಾಲಯಗಳು, ಕೋಚಿಂಗ್ ಸೆಂಟರ್ ಬಂದ್ ಆಗಿದ್ದು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಪಿಜಿಗಳು ಖಾಲಿ ಖಾಲಿ: ವಿವಿಧ ಊರುಗಳಿಂದ ಬರುವ ಸ್ಪರ್ಧಾಕಾಂಕ್ಷಿಗಳು ಪಿಜಿಗಳಲ್ಲಿ ನೆಲೆಸುವುದು ಸಾಮಾನ್ಯ. ವಿಜಯನಗರ ಭಾಗದ 100ಕ್ಕೂ ಅಧಿಕ ಪಿ.ಜಿ.ಗಳಲ್ಲಿ ಸಾವಿರಾರು ಪರೀಕ್ಷಾರ್ಥಿಗಳಿದ್ದರು. ಕೋವಿಡ್ 19 ಭೀತಿಯಿಂದ ತಾತ್ಕಲಿಕವಾಗಿ ಪಿಜಿಗಳನ್ನು ಮುಚ್ಚಬೇಕೆಂಬ ಆದೇಶದ ಹಿನ್ನೆಲೆ ಕೆಲವರು ಊರಿಗೆ ತೆರಳಿದ್ದಾರೆ. ಗ್ರಂಥಾಲಯಕ್ಕೆ ಪ್ರವೇಶವಿಲ್ಲದೆ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
80ಕ್ಕೂ ಅಧಿಕ ಕೋಚಿಂಗ್ ಸೆಂಟರ್ ಬಂದ್: ಮಲ್ಲೇಶ್ವರ, ಜಯನಗರ, ವಿಜಯನಗರ ಸೇರಿದಂತೆ ಹಲವೆಡೆ 80ಕ್ಕೂ ಅಧಿಕ ಕೋಚಿಂಗ್ ಸೆಂಟರ್ ಗಳಿದ್ದು, ಒಂದು ವಾರದಿಂದ ತರಗತಿಗಳನ್ನು ಬಂದ್ ಮಾಡಲಾಗಿದೆ. ಪೊಲೀಸ್ ಕಾನ್ಸ್‌ಸ್ಟೆಬಲ್, ಎಸ್‌ಐ, ಎಫ್ಡಿಎ, ಕೆಎಎಸ್ ನ ಹೊಸ ಬ್ಯಾಚ್ ಗಳು ಆರಂಭವಾಗಿ ಕೇವಲ 15 ದಿನಗಳಲ್ಲಿಯೇ ಕೋವಿಡ್ 19 ಭೀತಿಯಿಂದ ತರಗತಿಗಳನ್ನು ರದ್ದಾಗಿದೆ. ಉ.ಕರ್ನಾಟಕ ಭಾಗದ ಕೆಲವರು ಊರುಗಳಿಗೆ ವಾಪಾಸ್ಸಾಗಿದ್ದಾರೆ ಎಂದು ಉಜ್ವಲ ಅಕಾಡೆಮಿನಿರ್ದೇಶಕ ಕೆ.ಯು.ಮಂಜುನಾಥ ತಿಳಿಸಿದರು.
ಗ್ರಂಥಾಲಯಗಳಲ್ಲಿ ಶೇ. 5ರಷ್ಟೂ ಜನರಿಲ್ಲ! : ಬೆಂಗಳೂರಿನಲ್ಲಿ 200 ಗ್ರಂಥಾಲಯಗಳಿದ್ದು, ಪ್ರತಿದಿನ ಸುಮಾರು 25 ಸಾವಿರಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ. ಅದರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರೇ ಹೆಚ್ಚು. ಇದರಲ್ಲಿ ಪ್ರತಿದಿನ 2 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ಆದರೀಗ ಪುಸ್ತಕ ಪಡೆಯುವವರು, ಹಿಂದಿರುಗಿಸುವವರು ಬರುತ್ತಿಲ್ಲ. ಗ್ರಂಥಾಲಯದಲ್ಲಿ ಶೇ. 5ರಷ್ಟು ಮಂದಿ ಕೂಡ ಬರುತ್ತಿಲ್ಲ ಎಂದು ಗ್ರಂಥಾಲಯದ ಅಧಿಕಾರಿ ತಿಳಿಸಿದ್ದಾರೆ.
ಇನ್ನೆರಡು ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಆರಂಭವಾಗಲಿವೆ. ಸೋಂಕು ಹಿನ್ನೆಲೆ ತರಗತಿ ಬಂದ್ ಆಗಿವೆ. ಕೆಲ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿದ್ದು, ಇನ್ನೂ ಕೆಲವರು ಬೆಂಗಳೂರಿನಲ್ಲಿಯೇ ಇದ್ದಾರೆ. ಇವರು ಓದಲು ಗ್ರಂಥಾಲಯಗಳ ಪ್ರವೇಶವಿಲ್ಲದೆ ತೊಡಕಾಗಿದ್ದು, ಪರೀಕ್ಷೆಯನ್ನು ಮುಂದೂಡಬೇಕಿದೆ.
–ಕೆ.ಯು.ಮಂಜುನಾಥ, ಉಜ್ವಲ ಅಕಾಡೆಮಿ ನಿರ್ದೇಶಕ
ಸರ್ಕಾರದ ಸೂಚನೆಯಲ್ಲಿ ಗ್ರಂಥಾಲಯಗಳ ಪ್ರವೇಶ ನಿಷೇಧಿಸಿ, ಪುಸ್ತಕ ಎರವಲು ಪಡೆಯುವ ಅವಕಾಶ ಮುಂದುವರಿಸಲಾಗಿದೆ. ಹಂಪಿನಗರ, ವಿಜಯನಗರದ ಗ್ರಂಥಾಲಯಗಳು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವವರ ಮನೆಯಾಗಿ ಮಾರ್ಪಟ್ಟಿದ್ದವು. ಈಗ ದೂರ ದೂರದಲ್ಲಿ ಕುಳಿತು ಓದಲು ಅವಕಾಶ ನೀಡಲು ಚಿಂತಿಸಲಾಗಿದೆ.
–ಸತೀಶ್ ಹೊಸಮನಿ, ಗ್ರಂಥಾಲಯ ಇಲಾಖೆ ನಿರ್ದೇಶಕ
-ಮಂಜುನಾಥ ಗಂಗಾವತಿ