Advertisement

Competitive Exam: ರೈಲ್ವೇ ಪರೀಕ್ಷೆಯಲ್ಲಿ ಇನ್ನು ಕನ್ನಡ ಕಡ್ಡಾಯ: ಕೇಂದ್ರ ಸಚಿವ ಸೋಮಣ್ಣ

02:43 AM Oct 03, 2024 | Team Udayavani |

ದಾವಣಗೆರೆ: ರೈಲ್ವೇ ನೇಮಕಾತಿ ಮಂಡಳಿ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇನ್ನು ಕಡ್ಡಾಯವಾಗಿ ಕನ್ನಡದಲ್ಲೂ ಬರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

Advertisement

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕೆಂದು 40 ವರ್ಷಗಳ ಬೇಡಿಕೆ ಇತ್ತು. ಈ ವರ್ಷ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಇನ್ನು ಇದನ್ನು ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರೈಲ್ವೇ ಇಲಾಖೆಯ ಎಲ್ಲ ಹೊರ ರಾಜ್ಯದ ಅಧಿಕಾರಿಗಳು ಮೂರು ತಿಂಗಳಲ್ಲಿ ಕನ್ನಡ ಕಲಿಯಬೇಕು.ಹೊಸದಾಗಿ 16 ಸಾವಿರ ನೌಕರರ ನೇಮಕಾತಿ ಮಾಡಿಕೊಳ್ಳಲಾಗಿದ್ದು ಇನ್ನೂ 30 ಸಾವಿರ ನೌಕರರ ಭರ್ತಿಗೆ ಬೇಡಿಕೆ ಇದೆ. ಕನ್ನಡಿಗರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಉತ್ತರ ಭಾರತ ಹಾಗೂ ದಕ್ಷಿಣದ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ರೈಲ್ವೇ ಇಲಾಖೆಗೆ ಸಂಬಂಧಿಸಿ ರಾಜ್ಯದಲ್ಲಿ ನಿರೀಕ್ಷಿತ ಕೆಲಸ ಆಗಿಲ್ಲ. ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ 43 ಸಾವಿರ ಕೋಟಿ ರೂ.ಗಳ 21 ಯೋಜನೆಗಳನ್ನು 2026 ಡಿಸೆಂಬರ್‌ ಒಳಗೆ ಪೂರ್ಣಗೊಳಿಸಿ, ಜನವರಿ 2027ಕ್ಕೆ ಲೋಕಾರ್ಪಣೆಗೊಳಿಸುವ ಸಂಕಲ್ಪದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ. ರಾಜ್ಯ ಸರಕಾರ ರೈಲ್ವೇ ಯೋಜನೆಗಳಿಗೆ ಅಗತ್ಯವಾದ ಭೂಮಿ ಕೊಡಲಿ ಸಾಕು. ನಾವೇ (ರೈಲ್ವೆ ಇಲಾಖೆಯವರೇ) ಶೇ.100ರಷ್ಟು ಹಣ ಹಾಕಿ ರಾಜ್ಯಕ್ಕೆ ಏನು ಬೇಕಾದರೂ ಮಾಡಿಕೊಡುತ್ತೇವೆ. ಇದರಲ್ಲಿ ಯೋಜನೆಗೆ ಬೇಕಾದ ಭೂಸ್ವಾಧೀನಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಬಿಜೆಪಿ ಅಲ್ಲ, ಮೋದಿ ಸರ್ಕಾರ!
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿದ ಮಾತನಾಡಿದ ಸಚಿವ ವಿ. ಸೋಮಣ್ಣ, ಮೊದಲು ನಿಮ್ಮ ಇಲಾಖೆ ಖಾತೆಗೆ 5000 ರೂ. ಬರುತ್ತಿರಲಿಲ್ಲ. ಈಗ ಎಷ್ಟು ಸಾವಿರ ಕೋಟಿ ರೂ. ಬರುತ್ತಿದೆ ಗೊತ್ತಿದೆಯಾ? ಯಾವ ಸರ್ಕಾರದಿಂದ ಅಷ್ಟೊಂದು ದೊಡ್ಡ ಪ್ರಮಾಣದ ಹಣ ಬರುತ್ತಿದೆ ಗೊತ್ತಾ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಬಿಜೆಪಿ ಸರ್ಕಾರದಿಂದ’ ಎಂದಾಗ, ಬಿಜೆಪಿ ಸರ್ಕಾರ ಅಲ್ಲಾರಿ. ಅದು ಮೋದಿ ಸರ್ಕಾರದಿಂದ ಬರುತ್ತಿರುವುದು. ಆ ಪುಣ್ಯಾತ್ಮನಿಂದ ರೈಲ್ವೆ ಇಲಾಖೆಗೆ ಭರಪೂರ ಹಣ ಬರುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಓಡಾಡಿದ ಮೇಲೆ ನನಗೆ ಇಲಾಖೆಯ ಮಹತ್ವ ಗೊತ್ತಾಗಿದೆ. ನನ್ನ ಅವಧಿಯಲ್ಲಿ ಏನಾದರೂ ವಿಶೇಷ ಸಾಧನೆ ಮಾಡಬೇಕೆಂದು 200 ಕಿ.ಮೀ ವೇಗದಲ್ಲಿ ಹೋಗುತ್ತಿದ್ದೇನೆ. ಆದರೆ ಆಗುತ್ತಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next