ಬೆಂಗಳೂರು: ಮೈತ್ರಿ ಪಕ್ಷಗಳಿಂದ ಮಂಡ್ಯದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲಕ್ಕೆ ಸೋಮವಾರ, ಮಾ. 25ರಂದು ತೆರೆಬೀಳುವ ಸಾಧ್ಯತೆ ಇದೆ. ಈ ಸಂಬಂಧ ಜೆಡಿಎಸ್ ನಾಯಕರು, ಚನ್ನಪಟ್ಟಣ ಕಾರ್ಯಕರ್ತರ ಸಭೆ ಕರೆದಿದ್ದು, ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಇದನ್ನು ಸ್ವತಃ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಮಂಡ್ಯದಿಂದ ತಾವೇ ಕಣಕ್ಕಿಳಿಯಬೇಕು ಎಂದು ಒತ್ತಾಯಿಸಿ ಅಭಿಮಾನಿಗಳು, ಕಾರ್ಯಕರ್ತರು ಭಾನುವಾರ ಕುಮಾರಸ್ವಾಮಿ ಅವರ ನಿವಾಸದ ಮುಂದೆ ಜಮಾಯಿಸಿ ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಅವರು ಒಂದು ದಿನದಲ್ಲಿ ಮಂಡ್ಯ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ನಿರಾಸೆ ಉಂಟುಮಾಡುವುದಿಲ್ಲ ಎಂದು ಭರವಸೆ ನೀಡಿದರು.
ನಮ್ಮ ಪಕ್ಷದಲ್ಲಿ ದೊಡ್ಡ ನಾಯಕರು ಯಾರೂ ಇಲ್ಲ. ನಮ್ಮ ಪಕ್ಷದಲ್ಲಿ ಬೆಳೆದವರು ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿ ಹೋಗಿದ್ದಾರೆ. ನಿಮ್ಮ ಆಸೆಗೆ ನಿರಾಸೆ ಮಾಡುವುದಿಲ್ಲ ಎಂದು ಈ ಹಿಂದೆ ಮಂಡ್ಯದ ಸಭೆಯಲ್ಲೇ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ ಅವರು, ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ನನಗೆ ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆ, ಜೀವಕ್ಕೆ ಜೀವವಾಗಿ ನನ್ನನ್ನು ಪೊರೆದು ಸಲಹುತ್ತಿರುವ ಜಿಲ್ಲೆ ಮಂಡ್ಯ. ಈ ನೆಲವನ್ನು, ಈ ಜನರ ಪ್ರೀತಿ ವಿಶ್ವಾಸವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಸೋಮವಾರ ಚನ್ನಪಟ್ಟಣ ಕ್ಷೇತ್ರದ ಮುಖಂಡರನ್ನು ಕರೆಸಿ ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ನಿರಾಸೆ ಉಂಟುಮಾಡುವುದಿಲ್ಲ ಎಂದು ಭರವಸೆ ನೀಡಿದರು.
ಮಂಡ್ಯದಲ್ಲಿ ನನಗೆ ವಿಶೇಷ ಪ್ರೀತಿ ವಿಶ್ವಾಸ ಸಿಕ್ಕಿದೆ. ನನ್ನ ಆರೋಗ್ಯವನ್ನು ನೋಡಿಕೊಂಡು ಪಕ್ಷದ ಕೆಲಸ, ಜನರ ಸೇವೆ ಮಾಡಬೇಕಿದೆ ಎಂದರು.
ಇದಕ್ಕೆ ಮುನ್ನ ಮಾತನಾಡಿದ ನಿಖೀಲ್ ಕುಮಾರಸ್ವಾಮಿ, ಮಂಡ್ಯದಲ್ಲಿ ತಂದೆಯವರೇ ಸ್ಪರ್ಧಿಸಲಿ ಎಂದು ಒತ್ತಡ ಇದೆ. ಸೋಮವಾರ ಸಂಜೆಯೊಳಗೆ ಅಂತಿಮ ಆಗಲಿದೆ ಎಂದರು.