ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ನನಗೆ ರಾಜಕೀಯ ಮರುಜನ್ಮ ಒದಗಿಸಿಕೊಟ್ಟಿದೆ. ನಾನು 6 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಮುಂದಿನ ಚುನಾವಣೆಯಲ್ಲಿ ನಾನು ಇಲ್ಲಿಂದಲೆ ಸ್ಪರ್ಧಿಸಬೇಕೆಂದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿ ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ವರುಣಾ ಕ್ಷೇತ್ರಕ್ಕೆ ನನಗೆ ಹೆಚ್ಚಾಗಿ ಬರಲು ಸಾಧ್ಯವಾಗುತ್ತಿಲ್ಲ. ಹಿಂದೆ ನನ್ನ ಮಗ ರಾಕೇಶ್ ಬರುತ್ತಿದ್ದ ಈಗ ಯತೀಂದ್ರ ಬರುತ್ತಿದ್ದಾನೆ. ಕಳೆದ ಭಾರೀ ಆಶೀರ್ವದಿಸಿದಂತೆ ಈ ಬಾರಿಯೂ ಆಶೀರ್ವದಿಸಿ ಎಂದು ಪುತ್ರನ ಸ್ಫರ್ಧೆಯ ಸುಳಿವು ನೀಡಿದರು.
2006 ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೇವಲ 257ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2013ರಲ್ಲಿ ಕ್ಷೇತ್ರ ಬದಲಾವಣೆ ಮಾಡಿದ್ದ ಅವರು ವರುಣಾ ಕ್ಷೇತ್ರದಿಂದ 29,467 ಮತಗಳ ಅಂತರದಿಂದ ಜಯಗಳಿಸಿದ್ದರು.
ಹಾಲಿ ಶಾಸಕರಾಗಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರ ಪ್ರತಿನಿಧಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ಏರ್ಪಡುವುದು ನಿಶ್ಚಿತ.