ಬೆಂಗಳೂರು: ಬಿಜೆಪಿಯ ವಿಮಲಾಗೌಡ ಅವರ ನಿಧನದಿಂದ ತೆರವಾಗಿರುವ ರಾಜ್ಯ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಆಡಳಿತ ಪಕ್ಷದಲ್ಲಿ ಭಾರಿ ಲಾಬಿ ಆರಂಭವಾಗಿದೆ. ತೆರವಾಗಿರುವ ವಿಧಾನಪರಿಷತ್ ಸ್ಥಾನದ ಅವಧಿ ಹತ್ತು ತಿಂಗಳು. ಅದಕ್ಕೆ ಹತ್ತು ಆಕಾಂಕ್ಷಿಗಳು ಪ್ರಯತ್ನಿಸುತ್ತಿದ್ದಾರೆ. ಈಗ ಆಯ್ಕೆಯಾದರೆ, ಮುಂದಿನ ಬಾರಿ ಮರು ಆಯ್ಕೆಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಆಕಾಂಕ್ಷಿಗಳದು. ಆಡಳಿತಾರೂಢ ಕಾಂಗ್ರೆಸ್‌ಗೆ ಸಂಖ್ಯಾಬಲ ಇರುವುದರಿಂದ 2018ನೇ ಜೂನ್‌ಗೆ ಮುಕ್ತಾಯಗೊಳ್ಳಲಿರುವ ಒಂದು ಸ್ಥಾನ ಕಾಂಗ್ರೆಸ್‌ಗೆ ಲಭ್ಯವಾಗಲಿದ್ದು ಅವಿರೋಧ ಆಯ್ಕೆ ಸಾಧ್ಯತೆಯೇ ಹೆಚ್ಚು. ಹೀಗಾಗಿ, ಅವಕಾಶವನ್ನು ತಮ್ಮದಾಗಿಸಿಕೊಳ್ಳಲು ಆಕಾಂಕ್ಷಿಗಳು ತೆರೆಮರೆ ಕಸರತ್ತು ನಡೆಸಿದ್ದಾರೆ.
ಮಾಜಿ ಸಚಿವೆಯರಾದ ರಾಣಿ ಸತೀಶ್, ತಾರಾದೇವಿ ಸಿದ್ದಾರ್ಥ, ಮಾಜಿ ಮೇಯರ್ ರಾಮಚಂದ್ರಪ್ಪ, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ್, ನಜೀರ್ ಅಹಮದ್, ನಂಜಯ್ಯನ ಮಠ, ಮುಖಂಡ ಜೆ.ಸಿ.ಚಂದ್ರಶೇಖರ್, ಅಂಬೇಡ್ಕರ್ ನಿಗಮದ ಅಧ್ಯಕ್ಷ ಎನ್.ಎಸ್. ಬಸವರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ. ಶಿವಣ್ಣ , ಭಾರತಿ ಶಂಕರ್ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಪ್ರತಿಯೊಬ್ಬ ಆಕಾಂಕ್ಷಿಗಳೂ ತಮ್ಮದೇ ಲೆಕ್ಕಾಚಾರದಲ್ಲಿ ನಾಯಕರ ಮೊರೆ ಇಡುತ್ತಿದ್ದು, ಜಾತಿ, ಪ್ರದೇಶ ಹಾಗೂ ಮಹಿಳಾ ಕೋಟಾದಲ್ಲಿ ಪರಿಷತ್ ಪ್ರವೇಶ ಪಡೆಯಲು ಪ್ರಯತ್ನ ನಡೆಸಿದ್ದಾರೆ.
ತಾರಾದೇವಿ ಸಿದ್ದಾರ್ಥ, ರಾಣಿ ಸತೀಶ್, ಭಾರತಿ ಶಂಕರ್ ಮಹಿಳೆಯಿಂದ ಖಾಲಿಯಾಗಿರುವ ಸ್ಥಾನ ಮಹಿಳೆಯರಿಗೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿರುವ ಅಲ್ಲಮ ಪ್ರಭು ಪಾಟೀಲ್ ಪ್ರಾದೇಶಿಕತೆ ಆಧಾರದಲ್ಲಿ ಬೇಡಿಕೆ ಇಟ್ಟಿದ್ದರೆ, ನಂಜಯ್ಯನಮಠ ತಮಗೆ ಚುನಾವಣೆ ಸ್ಪರ್ಧೆಗೆ ಕ್ಷೇತ್ರ ಇಲ್ಲದ ಕಾರಣ ಹಿಂದಿನ ಚುನಾವಣೆಯಲ್ಲಿ ತಮಗೆ ಜವಾಬ್ದಾರಿ ವಹಿಸಿದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿಕೊಂಡು ಬಂದಿರುವುದಕ್ಕೆ ಅವಕಾಶ ನೀಡಬೇಕೆಂಬ ಕೋರಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಮಾಜಿ ಮೇಯರ್ ರಾಮಚಂದ್ರಪ್ಪ ತಮ್ಮ ಹಿರಿತನ ಪಕ್ಷದ ಸೇವೆಗೆ ಈಗಲಾದರೂ ತಮ್ಮನ್ನು ಪರಿಗಣಿಸಬೇಕೆಂಬ ಬೇಡಿಕೆ ಇಟ್ಟು ಪಕ್ಷದ ನಾಯಕರ ಮನವೊಲಿಕೆಗೆ ಮುಂದಾಗಿದ್ದಾರೆ. ತಮಗಿಂತ ಕಿರಿಯರು ಸಾಕಷ್ಟು ಜನರಿಗೆ ಪಕ್ಷ ವಿಧಾನ ಪರಿಷತ್‌ಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಬೆಂಗಳೂರಿನ ಮೇಯರ್ ಆಗಿ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಚುನಾವಣೆ ಸಂದರ್ಭದಲ್ಲಿ ಜಿಲ್ಲೆಗಳ ಉಸ್ತುವಾರಿಯಾಗಿ ಕೆಲಸ ನಿರ್ವಹಿಸಿದ್ದರೂ ತಮ್ಮನ್ನು ಪರಿಷತ್ತಿಗೆ ಪರಿಗಣಿಸಿಲ್ಲ. ಈಗಲಾದರೂ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಜೆ.ಸಿ. ಚಂದ್ರಶೇಖರ್, ಎನ್.ಎಸ್. ಬಸವರಾಜು, ನಜೀರ್ ಅಹಮದ್ ಅವರು ಹಿಂದೆಯೂ ಪರಿಷತ್ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಆಗ ತಮಗೆ ಸಿಗಬೇಕಾದ ಸ್ಥಾನ ರಾಜಕೀಯ ಲೆಕ್ಕಾಚಾರಕ್ಕೆ ಬೇರೆಯವರಿಗೆ ದೊರೆತಿದ್ದಕ್ಕೆ ಈ ಬಾರಿಯಾದರೂ ತಮ್ಮನ್ನು ಪರಿಗಣಿಸಬಹುದು ಎಂಬ ಆಸೆಗಣ್ಣಿನಿಂದ ಕಾಯುತ್ತ, ನಾಯಕರ ಮನವೊಲಿಕೆ ಪ್ರಯತ್ನ ಮುಂದುವರಿಸಿದ್ದಾರೆ.
ಇವರೊಂದಿಗೆ ಬಿ. ಶಿವಣ್ಣ ಹಾಗೂ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ದಾಳಿಗೊಳಗಾಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಆಪ್ತ ವಿನಯ್ ಕಾರ್ತಿಕ್ ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ, ಪಕ್ಷದ ನಾಯಕರು ಈ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ ಎನ್ನಲಾಗುತ್ತಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಸ್ಟ್ 16 ರಂದು ಬೆಂಗಳೂರಿಗೆ ಆಗಮಿಸುತ್ತಿರುವುದರಿಂದ ಆ ಕಾರ್ಯಕ್ರಮಗಳ ಯಶಸ್ವಿಗೆ ಪರಮೇಶ್ವರ್ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಅಲ್ಲಿವರೆಗೆ ಅಭ್ಯರ್ಥಿ ಆಯ್ಕೆ ಕುರಿತಂತೆ ಯಾವುದೇ ತೀರ್ಮಾನ ಆಗುವುದು ಅನುಮಾನ ಎನ್ನಲಾಗಿದೆ.
ಯಾರ್ಯಾರು ಆಕಾಂಕ್ಷಿಗಳು?
ರಾಣಿ ಸತೀಶ್
ತಾರಾದೇವಿ ಸಿದ್ದಾರ್ಥ
ಮಾಜಿ ಮೇಯರ್ ರಾಮಚಂದ್ರಪ್ಪ
ಅಲ್ಲಮಪ್ರಭು ಪಾಟೀಲ್
ನಜೀರ್ ಅಹಮದ್
ನಂಜಯ್ಯನ ಮಠ
ಜೆ.ಸಿ.ಚಂದ್ರಶೇಖರ್
ಎನ್.ಎಸ್. ಬಸವರಾಜು
ಬಿ. ಶಿವಣ್ಣ
ಭಾರತಿ ಶಂಕರ್
16ರ ಬಳಿಕ ಸಿಎಂ ದೆಹಲಿಗೆ
ಆಗಸ್ಟ್ 16ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿಯೇ ಪರಿಷತ್ ಅಭ್ಯರ್ಥಿಯ ಆಯ್ಕೆ ಕುರಿತಂತೆಯೂ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.