ಮೈಸೂರು: ಯಾವುದೇ ಪಕ್ಷಗಳ ಮೈತ್ರಿ ಮೇಲೆ ಚುನಾವಣೆ ನಡೆಯಲ್ಲ, ಅಭಿವೃದ್ಧಿಯ ಮೇಲೆ ಚುನಾವಣೆ ನಡೆಯುತ್ತೆ. ಹೀಗಾಗಿ ಅಭಿವೃದ್ಧಿಯೇ ನನ್ನ ಅಜೆಂಡಾ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸದನಾಗಿ ಕಳೆದ ಐದು ವರ್ಷ ಒಳ್ಳೆಯ ಕೆಲಸ ಮಾಡಿದ್ದೇನೆ,ಹೀಗಾಗಿ ತಮ್ಮ ಅಸ್ತಿತ್ವಕ್ಕಾಗಿ ಮೈತ್ರಿ ಮಾಡಿಕೊಂಡಿರುವ ರಾಜಕೀಯ ಪಕ್ಷಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ನಾನು ಜಾತಿ ಮತ್ತು ಹಣದ ಲೆಕ್ಕಾಚಾರ ಮಾಡುವುದಿಲ್ಲ. ಮೈತ್ರಿ ಪಕ್ಷಗಳ ಟಿಕೆಟ್ ಹಂಚಿಕೆಯನ್ನು ಇದೇನು ಸಿನಿಮಾ ಟಿಕೆಟ್ ಹಂಚಿಕೆ ಮಾಡಿದಂತೆಯೇ ಎಂದು ಲೇವಡಿ ಮಾಡಿದರು. ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಯಿಂದ ತಮಗೇ ಟಿಕೆಟ್ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಟಿಕೆಟ್ ಹಂಚಿಕೆ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಬಹಳ ಜನ ಆಸೆ ಇಟ್ಟುಕೊಂಡಿದ್ದಾರೆ, ಅದು ತಪ್ಪು ಅನ್ನಲ್ಲ.
ಆದರೆ, ಒಂದೆರಡು ಕ್ಷೇತ್ರ ಹೊರತುಪಡಿಸಿದರೆ ರಾಜ್ಯದ ಎಲ್ಲಾ ಹಾಲಿ ಸಂಸದರಿಗೂ ಟಿಕೆಟ್ ನೀಡುವುದಾಗಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿರುವುದರಿಂದ, ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗಿಂತ ದೊಡ್ಡವರ್ಯಾರು ಇಲ್ಲ, ಎರಡು ದಿನ ಕಾಯಿರಿ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 13 ಕೋಟಿ, ಆಯುಷ್ಮಾನ್ ಭಾರತ್ ಯೋಜನೆಯಡಿ 10 ಕೋಟಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 9 ಕೋಟಿ ಜನರಿಗೆ ಸೌಲಭ್ಯ, 6 ಕೋಟಿ ಶೌಚಾಲಯ ನಿರ್ಮಾಣ, 2.5 ಕೋಟಿ ಜನರಿಗೆ ಉಚಿತ ವಿದ್ಯುತ್, 6.9 ಕೋಟಿ ಉಚಿತ ಗ್ಯಾಸ್ ಸಂಪರ್ಕ ಸೇರಿದಂತೆ
-ಹಲವಾರು ಜನಪರ ಯೋಜನೆಗಳ ಮೂಲಕ ಪ್ರಧಾನಿ ನರೇಂದ್ರಮೋದಿ ಅವರು ದೇಶದಲ್ಲಿ ಉತ್ತಮ ಆಡಳಿತ ನೀಡಿದ್ದು, ಈ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದಾಗಿ ತಿಳಿಸಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಎಂ.ರಾಜೇಂದ್ರ, ಮೈಸೂರು- ಕೊಡಗು ಲೋಕಸಭಾ ಚುನಾವಣಾ ಸಂಚಾಲಕ ಎನ್.ವಿ.ಫಣೀಶ್, ಕಾನೂನು ವಿಭಾಗದ ಉಮೇಶ್ ಕುಮಾರ್ ಹಾಜರಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರ ನಿರ್ಬಂಧಿಸಬೇಕು ಎಂಬುದು ಅಪಹಾಸ್ಯದ ಸಂಗತಿ. ಸಾಮಾಜಿಕ ಜಾಲತಾಣಗಳನ್ನು ಮಿತಿಮೀರಿ ಬಳಸಿದರೆ ನಿರ್ಬಂಧಿಸಲು ಕಾನೂನುಗಳಿವೆ. ಸಮತೋಲನ ಇರಬೇಕು. ತಲೆನೋವು ಎಂದು ತಲೆಯನ್ನೇ ತೆಗೆದುಹಾಕಲಾಗುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ಚುನಾವಣಾ ಆಯೋಗ ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಗೊಂದಲ ಬೇಡ.
-ಪಿ.ಡಿ.ಮೇದಪ್ಪ, ಹಿರಿಯ ವಕೀಲ