ಉಡುಪಿ: ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸಿದ ಘಟನೆಗೆ ಸಂಬಂಧಿಸಿದಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಉಡುಪಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ಸಾಲ್ಯಾನ್ ಅವರು ಅಂಬಲಪಾಡಿ ಗ್ರಾಮದ ಕಿನ್ನಿಮೂಲ್ಕಿ ರಾ.ಹೆ. ಬಳಿ ಇರುವ ಕಾರ್ ಕೇರ್ ಸರ್ವಿಸ್ ಸೆಂಟರ್ ಬಳಿ ಸಿಬಂದಿಯೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಕಡೆಯಿಂದ ಬಲಾಯಿಪಾದೆ ಕಡೆಗೆ ಆರೋಪಿ ಆಶ್ರಿತ್ ಎಂಬಾತ ತಾನು ಚಲಾಯಿಸುತ್ತಿದ್ದ ಬಸ್ ಅನ್ನು ಅಪಾಯಕಾರಿಯಾಗಿ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದ.
ಮತ್ತೊಂದು ಪ್ರಕರಣದಲ್ಲಿ ಉಡುಪಿ ಸಂಚಾರ ಠಾಣೆಯ ಪೊಲೀಸ್ ಉಪನಿರೀಕ್ಷಕ ಶೇಖರ ಅವರು ಉಡುಪಿ ಪುತ್ತೂರು ಬಳಿಯ ಹ್ಯುಂಡೈ ಶೋರೂಂ ಬಳಿ ಸಿಬಂದಿಯೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ನಿಟ್ಟೂರು ಕಡೆಯಿಂದ ಕರಾವಳಿ ಕಡೆಗೆ ಆರೋಪಿ ರಜತ್ ಎಂಬಾತ ತಾನು ಚಲಾಯಿಸುತ್ತಿದ್ದ ಬಸ್ ಅನ್ನು ಸಾರ್ವಜನಿಕರಿಗೆ ತೊಂದರೆ ಉಂಟಾಗುವ ರೀತಿಯಲ್ಲಿ ಅಪಾಯಕಾರಿಯಾಗಿ ಚಲಾಯಿಸುತ್ತಿದ್ದ. ಎರಡೂ ಬಸ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಎರಡೂ ಬಸ್‌ಗಳು ಮಂಗಳವಾರ ರಾತ್ರಿ ಸ್ಪರ್ಧಾತ್ಮಕವಾಗಿ ಸಂಚರಿಸಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪ್ರಯಾಣಿಕರ
ಜೀವದೊಂದಿಗೆ ಚೆಲ್ಲಾಟ
ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳು ಎರಡು ನಿಮಿಷಕ್ಕೊಂದರಂತೆ ಸಂಚಾರ ಮಾಡುತ್ತಿದ್ದು, ಕೆಲವೊಂದು ಬಾರಿ ಟ್ರಾಫಿಕ್ ದಟ್ಟಣೆ ಸಹಿತ ಇತರ ಕಾರಣಗಳಿಂದಾಗಿ ಸಮಯದಲ್ಲಿ ವ್ಯತ್ಯಯವಾಗುತ್ತಿವೆ.
ಈ ವೇಳೆ ಬಸ್ ಚಾಲಕರು ಬಸ್‌ನಲ್ಲಿ ಪ್ರಯಾಣಿಕರು ಇದ್ದಾರೆ ಎಂಬುವುದನ್ನು ಮರೆತು ಬಸ್‌ಗಳನ್ನು ಚಲಾಯಿಸುವ ಕಾರಣ ಪ್ರಯಾಣಿಕರು ಭಯದಲ್ಲಿಯೇ ಸಂಚರಿಸುವಂತಾಗಿದೆ. ಇತರ ವಾಹನಗಳಿಗೂ ಢಿಕ್ಕಿ ಹೊಡೆಯುವ ಸಾಧ್ಯತೆಗಳಿರುತ್ತವೆ.
ಬಸ್‌ಗಳ ಈ ಸ್ಪರ್ಧೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಪೂರಕ ವ್ಯವಸ್ಥೆ ರೂಪಿಸಬೇಕೆಂಬುದು ಪ್ರಯಾ ಣಿಕರ ಆಗ್ರಹವಾಗಿದೆ.