ಕಲಬುರಗಿ: ಟಿಕೆಟ್ ಗಾಗಿ ಸಹೋದರರ ನಡುವೆ ಕದನ ಏರ್ಪಟ್ಟಿದ್ದ ಜಿಲ್ಲೆಯ ಅಫಜಲಪುರ ಕ್ಷೇತ್ರದ ಟಿಕೆಟ್ ಫೈಟ್ ದಲ್ಲಿ ಟಿಕೆಟ್ ವಂಚಿತರಾಗಿರುವ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತೀನ ವಿ. ಗುತ್ತೇದಾರ ಸಹೋದರನ ವಿರುದ್ಧ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಪ್ರಕಟಿಸಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಮಾಲೀಕಯ್ಯ ಗುತ್ತೇದಾರಗೆ ಅಫಜಲಪುರದಲ್ಲಿ ಬಿಜೆಪಿ ಘೋಷಣೆ ಮಾಡಿದ್ದು, ಟಿಕೆಟ್ ನಿರೀಕ್ಷೆ ಯಲ್ಲಿದ್ದ ಸಹೋದರ ನಿತೀನ ಗುತ್ತೇದಾರಗೆ ನಿರಾಸೆಯಾಗಿದೆ.
ನುಡಿದಂತೆ ಸಹೋದರ ಮಾಲೀಕಯ್ಯ ಗುತ್ತೇದಾರ ಕ್ಷೇತ್ರ ಬಿಟ್ಟು ಕೊಡಬೇಕಿತ್ತು. ಕ್ಷೇತ್ರದಲ್ಲಿ ಕಳೆದ ಐದು ವರ್ಷದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರಿಂದ ಟಿಕೆಟ್ ತಮಗೆ ದೊರಕಬಹುದೆಂದು ನಿರೀಕ್ಷೆ ಹೊಂದಿದ್ದೇ. ಆದರೆ ಟಿಕೆಟ್ ಕೊಡದಿದ್ದರೆ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸುವುದಾಗಿ ಮೊದಲೇ ಹೇಳಿದ್ದೇ, ಅದರಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಾಗುವುದು ಎಂದು ಪುನರುಚ್ಚರಿಸಿದರು.
ಬೆಂಗಳೂರಿನಿಂದ ಒಂದೇ ವಿಮಾನದಲ್ಲಿ ಸಹೋದರ ಮಾಲೀಕಯ್ಯ ಗುತ್ತೇದಾರ ಜತೆಗೆ ಆಗಮಿಸಿದ ನಿತೀನ ಗುತ್ತೇದಾರ, ಯಾವುದೇ ಸಂಧಾನ ಹಾಗೂ ಮಾತುಕತೆಗೆ ಜಗ್ಗುವುದಿಲ್ಲ ಎಂದು ತಿಳಿಸಿದರು.
ಸ್ಪರ್ಧೆ ಮಾಡುವ ಕುರಿತಾಗಿ ಕಾರ್ಯಕರ್ತರೊಂದಿಗೆ ಮತ್ತೊಂದು ಸಭೆ ನಡೆಸುವ ಅವಶ್ಯಕವಿಲ್ಲ. ಯಾವ ದಿನ ನಾಮಪತ್ರ ಸಲ್ಲಿಸಬೇಕೆಂಬುದನ್ನು ಕಾರ್ಯಕರ್ತರೊಂದಿಗೆ ಚರ್ಚಿಸುತ್ತೇನೆ ಎಂದರು.
ಪಕ್ಷ ಯುವಕನಾದ ನನಗೆ ಟಿಕೆಟ್ ನೀಡುತ್ತದೆ ಎನ್ನುವ ನಂಬಿಕೆ ಇತ್ತು. ಬಿಜೆಪಿ ನನಗೆ ಟಿಕೆಟ್ ನೀಡದಿದ್ದರೂ ಸರಿ ನನ್ನ ಸ್ಪರ್ಧೆ ಖಚಿತ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿಯುವುದು ನೂರಕ್ಕೆ ನೂರರಷ್ಟು ಖಚಿತ.
ನಿನಗೆ ಭವಿಷ್ಯ ಇದೆ ತಾಳ್ಮೆಯಿಂದ ಇರು ಎಂದು ನನ್ನ ಅಣ್ಣ ಮಾಲೀಕಯ್ಯ ಗುತ್ತೇದಾರ ಹೇಳುತ್ತಲೇ ಬಂದಿದ್ದಾರೆ. ಈ ಬಾರಿ ಯಾವುದೇ ಒತ್ತಡಗಳಿಗೆ ಮಣಿಯಲಾರೆ. ಒಂದೆಡೆ ಅಣ್ಣ ಮಾಲಿಕಯ್ಯ ಗುತ್ತೇದಾರ್ ಇನ್ನೊಂದಡೆ ಹಿರಿಯರಾದ ಎಂ ವೈ ಪಾಟೀಲ್ ಇಬ್ಬರ ನಡುವೆ ಯುವಕನಾದ ನನಗೆ ಜನ ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ನಿತೀನ ವಿಶ್ವಾಸ ವ್ಯಕ್ತಪಡಿಸಿದರು.