ಬೆಂಗಳೂರು: ಮಂಡ್ಯ, ಜೆಡಿಎಸ್‌ನ ಭದ್ರಕೋಟೆ. ಆ ಕ್ಷೇತ್ರದ ಜನತೆ ಪಕ್ಷವನ್ನು ಬೆಳೆಸಿಕೊಂಡು ಬಂದಿದ್ದಾರೆ. ಇಂದು ಯಾರೋ ಬಂದು ಸ್ಪರ್ಧಿಸುತ್ತಾರೆ ಎಂದು ಹೇಳಿದರೆ ನಾನು ಜನರ ಭಾವನೆ ವಿರುದ್ಧ ಹೋಗಲು ಸಾಧ್ಯವಿಲ್ಲ. ಸೂಕ್ತ ಸಂದರ್ಭ ಬಂದಾಗ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವಂತೆ ಕಾರ್ಯಕರ್ತರು ಹಿರಿಯ ನಟಿ ಸುಮಲತಾ ಅಂಬರೀಷ್ ಅವರನ್ನು ಒತ್ತಾಯಿಸಿರುವ ಬಗ್ಗೆ ಗೃಹ ಕಚೇರಿ “ಕೃಷ್ಣಾ”ದಲ್ಲಿ ಶುಕ್ರವಾರ ಪ್ರಕ್ರಿಯಿಸಿದ ಕುಮಾರಸ್ವಾಮಿ, ಹಿರಿಯ ನಟಿ ಸುಮಲತಾ ಅಂಬರೀಷ್ ಅವರು ನಮ್ಮ ಪಕ್ಷದಲ್ಲೇ ಇಲ್ಲ. ಅವರು ಮಂಡ್ಯದಿಂದ ಸ್ಪರ್ಧಿಸಲು ತೊಂದರೆ ಇಲ್ಲ. ದೇಶದಲ್ಲಿ ಯಾರನ್ನೂ ಚುನಾವಣೆಯಿಂದ ಸ್ಪರ್ಧಿಸದಂತೆ ತಡೆಯಲು ಸಾಧ್ಯವಿಲ್ಲ. ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಹೇಳಿದರು.
ಚುನಾವಣೆಗೆ ನಿಲ್ಲಿಸುತ್ತೇವೆ: “ನನ್ನ ಪುತ್ರ ನಿಖೀಲ್ ಚುನಾವಣೆಗೆ ಸ್ಪರ್ಧಿಸುತ್ತಾನೆ ಎಂದು ನಾನು ಹೇಳಿಲ್ಲ. ನಿಖೀಲ್ ಕೂಡ ಸ್ಪರ್ಧಿಸುವುದಾಗಿ ಹೇಳಿಲ್ಲ. ಹಾಗಿದ್ದರೂ ದೇವೇಗೌಡರ ಕುಟುಂಬ, ಅಂಬರೀಷ್ ಕುಟುಂಬ ದಿಂದ ಸ್ಪರ್ಧೆ ಎಂಬ ಮಾತುಗಳನ್ನು ಅನಗತ್ಯವಾಗಿ ಪ್ರಸ್ತಾಪಿಸಲಾಗುತ್ತಿದೆ. ನಿಖೀಲ್‌ನನ್ನು ಚುನಾವಣೆಗೆ ನಿಲ್ಲಿಸಬೇಕು ಎಂದರೆ ನಿಲ್ಲಿಸುತ್ತೇವೆ. ನಾವು ಅಲ್ಲಿನ ಜನರ ಮಧ್ಯೆ ಹೋರಾಟ ಮಾಡಿ ಬಂದವರು. ಜನರ ಕಷ್ಟ, ಸುಖಗಳಿಗೆ ಸ್ಪಂದಿಸಿ ಹೋರಾಟ ಮಾಡಿ ಬಂದಿದ್ದೇವೆ’ ಎಂದು ತಿಳಿಸಿದರು.
ಹಾಸನದಲ್ಲಿ ದೇವೇಗೌಡರು ಸ್ಪರ್ಧಿಸುತ್ತಿಲ್ಲ ಎಂದಾಗ ದೇವೇಗೌಡರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಅದಕ್ಕಾಗಿ ಎಲ್ಲರೂ ಒತ್ತಾಯಿಸಬೇಕು ಎಂದು ನಿಖೀಲ್ ಹೇಳಿದ್ದ. ಅವನೆಲ್ಲೋ ಸಿನಿಮಾ ಮಾಡಿಕೊಂಡಿದ್ದಾನೆ. ಅವನನ್ನು ಮಾಧ್ಯಮಗಳೇ ರಾಜಕೀಯಕ್ಕೆ ಎಳೆದು ತರಲು ಉತ್ತೇಜಿಸುತ್ತಿವೆ ಎಂಬ ಅನುಮಾನ ಮೂಡುತ್ತದೆ ಎಂದು ಹೇಳಿದರು.
ಅನಿವಾರ್ಯ ಪರಿಸ್ಥಿತಿ ಬಂದರೆ ಲೋಕಸಭಾ ಚುನಾವಣೆಗೆ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂಬ ಸಚಿವ ರೇವಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಹಾಸನ ಲೋಕಸಭಾ ಕ್ಷೇತ್ರದ ದೃಷ್ಟಿಯಿಂದ ರೇವಣ್ಣ ಅವರು ಆ ರೀತಿ ಹೇಳಿರಬಹುದು. ಅಲ್ಲಿನ ಸ್ಥಳೀಯ ರಾಜಕೀಯ ಕಾರಣದಿಂದ ಬಹುಶಃ ಅವರು ಹಾಗೆ ಹೇಳಿರುವ ಸಾಧ್ಯತೆಯಿದೆ. ಆದರೆ, ಆ ರೀತಿಯ ವಾತಾವರಣ ನಿರ್ಮಾಣವಾಗದು ಎಂದು ಹೇಳಿದರು.