Advertisement

ತಾಕತ್ತಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧಿಸಿ

10:02 AM Jan 22, 2018 | Team Udayavani |

ಚಾಮ ರಾಜನಗರ: “ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮಗೆ ತಾಕತ್ತಿದ್ದರೆ, ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬ ವಿಶ್ವಾಸವಿದ್ದರೆ ನೀವು ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಚುನಾವಣೆಗೆ ಸ್ಪರ್ಧಿಸಿ. ಅಲ್ಲಿ ನಿಮಗೆ ಜನರು ಪಾಠ ಕಲಿಸುತ್ತಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಹಿರಂಗ ಸವಾಲು ಹಾಕಿದ್ದಾರೆ.

Advertisement

ನಗರದಲ್ಲಿ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಗೆಲ್ಲುವ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅವರು ಬೇರೆ ಕ್ಷೇತ್ರಕ್ಕೆ ಓಡಿ ಹೋಗಬಾರದು. ಚಾಮುಂಡೇಶ್ವರಿ ಕ್ಷೇತ್ರದಲ್ಲೇ
ಸ್ಪರ್ಧಿಸಬೇಕು. ಆಗ ಅವರ ನಿಜವಾದ ಬಣ್ಣ ಬಯಲಾಗುತ್ತದೆ ಎಂದು ಲೇವಡಿ ಮಾಡಿದರು.

ಬೇಲ್‌ ಸಿಗಲಿಲ್ಲ: “ಮಾತೆತ್ತಿದರೆ ಸಿದ್ದರಾಮಯ್ಯನವರು ಹೋದ ಕಡೆಯಲ್ಲೆಲ್ಲಾ ಯಡಿಯೂರಪ್ಪನ ಬಗ್ಗೆ ಮಾತನಾಡುತ್ತಾರೆ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವನು ಎನ್ನುತ್ತಾರೆ. ಹಾಗಾದರೆ, ನಿಮ್ಮ ಪಕ್ಷದ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಜಾಮೀನಿನ ಮೇಲೆ ಹೊರಗಿಲ್ಲವೆ?. ನನಗೆ ನ್ಯಾಯಾಧೀಶರು ಅಂದು ಇಲ್ಲದ ಕಾರಣ ಬೇಲ್‌ ಸಿಗಲಿಲ್ಲ. ಹಾಗಾಗಿ 22 ದಿನ ಒಳಗಿರಬೇಕಾಯಿತು. ನಂತರ ನ್ಯಾಯಾಧೀಶರೇ ನನ್ನನ್ನು ನಡೆಸಿಕೊಂಡ ಬಗ್ಗೆ ಛೀಮಾರಿ ಹಾಕಿದ್ದಾರೆ’ ಎಂದು ಸಮರ್ಥಿಸಿಕೊಂಡರು.
“ರಾಜ್ಯ ಸರ್ಕಾರವನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೇ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಮೆದುಳೇ ಇಲ್ಲ ಎಂದಿದ್ದಾರೆ. ಅವೈಜಾnನಿಕ, ಅವಾಸ್ತವಿಕ ಮರಳು ನೀತಿ ಎಂದು ಟೀಕಿಸಿದ್ದಾರೆ. ನಿಮ್ಮ ಸರ್ಕಾರ ಬದುಕಿದೆಯಾ
ಸಿದ್ದರಾಮಯ್ಯನವರೇ? ಸರ್ಕಾರಿ ಕಚೇರಿಗಳಲ್ಲಿ ಹಣ ನೀಡದೇ ಯಾವುದಾದರು ಕೆಲಸ ಆಗುತ್ತಿದೆಯಾ?’ ಎಂದು ಕುಟುಕಿದರು. 

ಯಡಿಯೂರಪ್ಪಗೆ ಗಂಟಲು ಸಮಸ್ಯೆ: ಹನೂರಿನಲ್ಲಿ ಶನಿವಾರ ಗಂಟಲು ಸಮಸ್ಯೆಯಿಂದಾಗಿ ಹೆಚ್ಚಾಗಿ ಏನನ್ನೂ ಮಾತನಾಡದ ಯಡಿಯೂರಪ್ಪಗೆ ಮಲೆ ಮಹದೇಶ್ವರ ಬೆಟ್ಟದಲ್ಲೂ ಗಂಟಲು ಸಮಸ್ಯೆ ಉಲ್ಬಣವಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಗೆ ಮಲೆ ಮಹದೇಶ್ವರನ ದರ್ಶನಕ್ಕೆ ಆಗಮಿಸುತ್ತೇನೆ ಎಂದಿದ್ದ ಯಡಿಯೂರಪ್ಪ, ಬೆಳಗ್ಗೆ ದರ್ಶನಕ್ಕೆ ಆಗಮಿಸಿದ್ದರು. ಬಳಿಕ ಸಾಲೂರು ಮಠದತ್ತ ತೆರಳಿ ಉಪಹಾರ ಸೇವಿಸಿ ಕೊಳ್ಳೇಗಾಲದತ್ತ ಪ್ರಯಾಣ ಬೆಳೆಸಿದರು. 

ಚಾಮುಂಡೇಶ್ವರಿಯಿಂದಲೇ ನನ್ನ ಸ್ಪರ್ಧೆ: ಸಿದ್ದು
ಚಿಕ್ಕಬಳ್ಳಾಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವು ಚಾಮುಂಡಿ ಕ್ಷೇತ್ರದಲ್ಲಿಯೆ ಸ್ಪರ್ಧಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಪಪಡಿಸಿದರು. ಬಾಗೇಪಲ್ಲಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಾಧ್ಯಮಗಳಲ್ಲಿ
ಬರುತ್ತಿರುವ ವರದಿಗಳು ಸುಳ್ಳು. ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ನಾನು ಎಲ್ಲೂ ಹೇಳಿಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದಲೇ ತಾವು ಚುನಾವಣಾ ಕಣಕ್ಕೆ ಇಳಿಯುವುದಾಗಿ ಸ್ಪಷ್ಪ ಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next