ಗೊರೇಬಾಳ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಲಿದೆ. ಕೊಪ್ಪಳ ಲೋಕಸಭೆ ಕ್ಷೇತ್ರದ ಟಿಕೆಟ್ಗಾಗಿ ಸಿಂಧನೂರು ಬ್ಲಾಕ್ ಕಾಂಗ್ರೆಸ್‌ನಿಂದ ನಾಲ್ವರು ಆಕಾಂಕ್ಷಿಗಳ ಹೆಸರುಗಳನ್ನು ವೀಕ್ಷಕರಿಗೆ ಸಲ್ಲಿಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಹೊಸಪೇಟೆಯಲ್ಲಿ ಎಐಸಿಸಿ ಕಾರ್ಯದರ್ಶಿ, ಹೈ-ಕ ಭಾಗದ ಕಾಂಗ್ರೆಸ್ ಉಸ್ತುವಾರಿ ಶೈಲಜನಾಥ ಶಾಖೆ ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪ್ರಮುಖ ಚುನಾಯಿತ ಪ್ರತಿನಿಧಿಗಳ ಸಭೆ ಕರೆದಿದ್ದರು. ಸಭೆಯಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖ 12 ಜನ ಆಕಾಂಕ್ಷಿಗಳ ಹೆಸರು ಸಲ್ಲಿಕೆಯಾಗಿದ್ದು, ಟಿಕೆಟ್ಗಾಗಿ ಭಾರೀ ಪೈಪೋಟಿ ಕಂಡುಬರುತ್ತಿದೆ. ಸಿಂಧನೂರಿನ ನಾಲ್ವರು ಸೇರಿದಂತೆ ಪ್ರಮುಖವಾಗಿ ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಶಿವರಾಜ ತಂಗಡಗಿ, ಬಳ್ಳಾರಿಯ ಸೂರ್ಯ ನಾರಾಯಣ ರೆಡ್ಡಿ, ಕೊಪ್ಪಳದ ರಾಜಶೇಖರ ಹಿಟ್ನಾಳ, ಕುಷ್ಟಗಿಯ ಶರಣೇಗೌಡ ಬಯ್ನಾಪುರ, ಗಂಗಾವತಿಯ ಶಿವರಾಮೇಗೌಡ ಹಾಗೂ ಮಳಿಮಠ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲುವು ಸುಲಭವಾಗಲಿದೆ ಎನ್ನುವ ಲೆಕ್ಕಾಚಾರ ಆಕಾಂಕ್ಷಿಗಳಲ್ಲಿದೆ. ಹೀಗಾಗಿ ಸಹಜವಾಗಿಯೇ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಸೋಮವಾರ ಸಿಂಧನೂರಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ತಾವು ಸ್ಪರ್ಧಿಸುವುದಿಲ್ಲ. ಬದಲಾಗಿ ಕಾಂಗ್ರೆಸ್ ಯಾರಿಗೆ ಟಿಕೆಟ್ ಕೊಡಲಿದೆಯೇ ಅವರನ್ನು ಗೆಲ್ಲಿಸಬೇಕು ಎಂದು ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಹೇಳಿದ್ದಾರೆ. ಜೊತೆಗೆ ಗಂಗಾವತಿಯ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೆಸರು ಸಹ ಪ್ರಮುಖವಾಗಿ ಕೇಳಿ ಬಂದಿತ್ತು. ಆದರೆ ಅವರೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಬಹುತೇಕ ಸಿಂಧನೂರು ಇಲ್ಲವೇ ಯಲಬುರ್ಗಾದವರಿಗೆ ಟಿಕೆಟ್ ಖಚಿತವಾಗಲಿದೆ ಎಂಬ ಚರ್ಚೆಗಳು ಪಕ್ಷದ ಕಾರ್ಯಕರ್ತರಲ್ಲಿ ನಡೆದಿವೆ.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಭರ್ಜರಿ ತಯಾರಿ ನಡೆಸಿದೆ. ಟಿಕೆಟ್ಗಾಗಿ ಆಕಾಂಕ್ಷಿಗಳು ಹೈಕಮಾಂಡ್ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದ್ದಾರೆ. ಆದರೆ ಹಾಲಿ ಸಂಸದರಿರುವ ಬಿಜೆಪಿಯಲ್ಲಿ ಮಾತ್ರ ಚುನಾವಣಾ ಉತ್ಸಾಹ ಕಾಣುತ್ತಿಲ್ಲ. ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಸಿಗಲಿದೆಯೇ? ಅಥವಾ ತಪ್ಪಲಿದೆಯೇ ಎನ್ನುವ ಬಗ್ಗೆಯೇ ಸಿಂಧನೂರಲ್ಲಿ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಸ್ಥಳೀಯ ಬಿಜೆಪಿ ಮುಖಂಡರಲ್ಲಿನ ವೈಮನಸ್ಸಿನಿಂದಾಗಿ ಕಾರ್ಯಕರ್ತರು ಪಕ್ಷ ಸಂಘಟನೆಯಿಂದ ಬಹುತೇಕ ದೂರ ಉಳಿದಿದ್ದಾರೆ.