Advertisement

ಕೋಟೆ ಪುರಸಭೆ ಗದ್ದುಗೆಗೆ ಪೈಪೋಟಿ

11:21 AM Dec 16, 2018 | |

ಎಚ್‌.ಡಿ.ಕೋಟೆ: ಕಳೆದ 3 ತಿಂಗಳ ಹಿಂದೆ ಎಚ್‌.ಡಿ.ಕೋಟೆ ಪುರಸಭೆ ಚುನಾವಣೆ ನಡೆದು 23 ಸದಸ್ಯರು ಆಯ್ಕೆಯಾಗಿದ್ದರೂ ಮೀಸಲಾತಿ ಗೊಂದಲದಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನೆನಗುದಿಗೆ ಬಿದ್ದಿತ್ತು. ಇದೀಗ ಸರ್ಕಾರದ ಸೂಚನೆಯಂತೆಯೇ ಮೀಸಲಾತಿಗೆ ಹೈಕೋರ್ಟ್‌ ಸಮ್ಮತಿ ನೀಡಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ಪುರಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್‌ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ್ದ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ಆಯ್ಕೆ ನಡೆದಿರಲಿಲ್ಲ.

ಕಳೆದ 5 ದಿನಗಳ ಹಿಂದಷ್ಟೆ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ತೆರವಾಗಿದ್ದು, ಸೆ.3 ರಂದು ಸರ್ಕಾರ ಹೊರಡಿಸಿದ್ದ ಮಿಸಲಾತಿ ಅನ್ವಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಲು ಸೂಚಿಸಿದೆ. ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆರಲು ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ತೆರೆಮರೆಯಲ್ಲಿ ಕಸರತ್ತು ಜೋರಾಗಿ ನಡೆಯುತ್ತಿದೆ.

ಕಳೆದ 2 ವರ್ಷಗಳ ಹಿಂದೆ ಕ್ಷೇತ್ರದ ಸಂಸದರು ಹಾಗೂ ಅಂದಿನ ಶಾಸಕರಾಗಿದ್ದ ಎಸ್‌.ಚಿಕ್ಕಮಾದು ಪರಿಶ್ರಮದ ಫಲವಾಗಿ ಪಟ್ಟಣ ಪಂಚಾಯಿತಿಯನ್ನು ಸರ್ಕಾರ 2 ಪುರಸಭೆಯನ್ನಾಗಿ ಮೇಲ್ದರ್ಜೆಗೆರಿಸಿತ್ತು. ಪುರಸಭೆಗೆ ಪಟ್ಟಣದ 3 ಕಿ.ಮೀ ವ್ಯಾಪ್ತಿಯ 10ಕ್ಕೂ ಹೆಚ್ಚು ಗ್ರಾಮಗಳು ಸೇರಿದ್ದರಿಂದ ಹೊಸದಾಗಿ ವಾರ್ಡ್‌ ಪುನರ್‌ ರಚನೆಯಾಗಿ ಹಿಂದೆ ಇದ್ದ 13 ವಾರ್ಡ್‌ಗಳ ಬದಲು 23 ವಾರ್ಡ್‌ಗಳಾಗಿದ್ದವು. 

ಮೀಸಲಾತಿ ಗೊಂದಲ: ಕಳೆದ ಆಗಸ್ಟ್‌ 29 ರಂದು ಪುರಸಭೆಗೆ ಚುನಾವಣೆ ನಡೆದಿತ್ತು. ಸರ್ಕಾರ ಸೆ.3 ರಂದು ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮಿಸಲಾತಿ ಪಟ್ಟಿಯನ್ನು ಪ್ರಕಟಿಸಿತ್ತು. ಬಳಿಕ ಆದ ಬದಲಾವಣೆಯಲ್ಲಿ ಸರ್ಕಾರ ಮತ್ತೆ ಸೆ.6 ರಂದು ಮೊದಲು ಹೊರಡಿಸಿದ್ದ ಮಿಸಲಾತಿ ಪಟ್ಟಿಯಲ್ಲಿ 40 ಸ್ಥಳೀಯ ಸಂಸ್ಥೆಗಳ ಮಿಸಲಾತಿಯನ್ನು ಅದಲು ಬದಲು ಮಾಡಿ ಅಧಿಸೂಚನೆ ಹೊರಡಿಸಿತ್ತು.

Advertisement

ಸರ್ಕಾರ ಮೊದಲು ಹೊರಡಿಸಿದ್ದ ಮಿಸಲಾತಿ ಪಟ್ಟಿಯನ್ನು ತಿದ್ದುಪಡಿ ಮಾಡಿ ಮಿಸಲಾತಿಯನ್ನು ಬದಲಿಸಿದ ಕೆಲ ಸ್ಥಳೀಯ ಸಂಸ್ಥೆಗಳ ಸದಸ್ಯರು ನ್ಯಾಯಾಲಯದ ಮೊರೆ ಹೋದ ಪರಿಣಾಮ ಸರ್ಕಾರ ತಿದ್ದುಪಡಿ ಮಾಡಿ ಎರಡನೇ ಬಾರಿ ಹೊರಡಿಸಿದ್ದ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿಗೆ ತಡೆಯಾಜ್ಞೆ ನೀಡಿತ್ತು. ಇದರಿಂದಾಗಿ ಕಳೆದ 3 ತಿಂಗಳ ಹಿಂದೆ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನೆನಗುದಿಗೆ ಬಿದ್ದತ್ತು.

ಗರಿಗೆದರಿದ ರಾಜಕೀಯ: ಮೀಸಲಾತಿ ಅನ್ವಯ ಎಚ್‌.ಡಿ.ಕೋಟೆ ಪುರಸಭೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇನ್ನೂ ದಿನಾಂಕ ಘೋಷಣೆ ಆಗದಿದ್ದರೂ ಕಳೆದೆರಡು ದಿನಗಳಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. 23 ಸದಸ್ಯ ಬಲದ ಪುರಸಭೆಗೆ 11 ಕಾಂಗ್ರೆಸ್‌ ಸದಸ್ಯರು ಆಯ್ಕೆಯಾಗಿದ್ದು, ಸ್ಪಷ್ಟ ಬಹುಮತ ಹೊಂದಿದೆ. ಸ್ವ-ಪಕ್ಷದಲ್ಲೇ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. 

ಅನುದಾನ ಸಿಗದೆ ಅಭಿವೃದ್ಧಿ ಕುಂಠಿತ: ಸುಮಾರು ನಾಲ್ಕು ತಿಂಗಳ ಕಳೆದರೂ ಪುರಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನೊಳಗೊಂಡ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಾರದೆ, ವಾರ್ಡ್‌ಗಳ ಅಭಿವೃದ್ಧಿಗೂ ಅನುದಾನ ಸಿಗದೇ ನೂತನ ಸದಸ್ಯರು ಪರಿತಪಿಸುತ್ತಿದ್ದರು.

ಸಾರ್ವಜನಿಕರು ಕೂಡ ಮೂಲಭೂತ ಸೌಲಭ್ಯಕ್ಕಾಗಿ ಪರದಾಡುವಂತಾಗಿತ್ತು. ಈಗ ಕೊನೆಗೂ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ತೆರವಾಗಿದ್ದು, ಸದಸ್ಯರಲ್ಲಿ ಸಂತಸ ಮೂಡಿದೆ. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ದಿನಾಂಕ ನಿಗದಿಪಡಿಸಿ ಜಿಲ್ಲಾಧಿಕಾರಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಚುನಾವಣೆ ನಡೆಸಲು ಸೂಚಿಸದಲ್ಲಿ, ಇಲ್ಲಿನ ಪುರಸಭೆ ಆಡಳಿತಾಧಿಕಾರಿಗಳಾಗಿರುವ ಉಪವಿಭಾಗಾಕಾರಿಗಳು ಚುನಾವಣೆ ನಡೆಸಲಿದ್ದಾರೆ.

* ಬಿ.ನಿಂಗಣ್ಣ ಕೋಟೆ

Advertisement

Udayavani is now on Telegram. Click here to join our channel and stay updated with the latest news.

Next