ದೇವದುರ್ಗ: ಸ್ಥಳೀಯ ಪುರಸಭೆ ಫಲಿತಾಂಶ ಹೊರಬೀಳುತ್ತಿದ್ದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಸರಕಾರ ಮೀಸಲು ಪ್ರಕಟಿಸಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಒಟ್ಟು 23 ಸ್ಥಾನ ಹೊಂದಿರುವ ಪುರಸಭೆಯಲ್ಲಿ ಕಾಂಗ್ರೆಸ್ -11, ಬಿಜೆಪಿ-8, ಜೆಡಿಎಸ್-3 ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.
ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲದ್ದರಿಂದ ಕಾಂಗ್ರೆಸ್ ಜೆಡಿಎಸ್ ಸದಸ್ಯರ ಬೆಂಬಲ ಇಲ್ಲವೇ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯಬಹುದು. ಇನ್ನು ಸ್ಥಳೀಯ ಶಾಸಕ ಬಿಜೆಪಿಯ ಕೆ. ಶಿವನಗೌಡ ನಾಯಕ ಮತ್ತೆ ಪುರಸಭೆ ಅಧಿಕಾರವನ್ನು ಕೇವಲ 8 ಸದಸ್ಯರನ್ನು ಹೊಂದಿದ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ತಂತ್ರ ಹೆಣೆದರೆ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರನ್ನು ತಮ್ಮತ್ತ ಸೆಳೆಯುವ ಸಂಭವವೂ ಇದೆ. ಹೀಗಾಗಿ ಅಧಿಕಾರದ ಗಾದಿ ಯಾರಿಗೆ ಒಲಿಯಲಿದೆ ಎಂಬುದು ಸ್ಪಷ್ಟವಾಗಿಲ್ಲ. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇರುವುದರಿಂದ ಇಲ್ಲೂ ಇಬ್ಬರೂ ಕೂಡಿ ಅಧಿಕಾರ ಹಿಡಿಯುವ ಸಾಧ್ಯತೆಯೂ ಇದೆ. ಎಲ್ಲವೂ ಪಕ್ಷದ ವರಿಷ್ಠರ ಮೇಲೆ ನಿರ್ಧರಿತವಾಗಲಿದೆ.
ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದ್ದರಿಂದ 11 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ನಲ್ಲಿ ನಾಲ್ವರು ಸಾಮಾನ್ಯ ವರ್ಗದವರೇ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಸದಸ್ಯರಲ್ಲೇ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ದು, ಸಂಸದ ಬಿ.ವಿ. ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ಸದಸ್ಯರಾದ 2ನೇ ವಾರ್ಡ್‌ನ ಸದಸ್ಯ ಶರಣಗೌಡ ಗೌರಂಪೇಟೆ, 11ನೇ ವಾರ್ಡ್‌ನ ಖಾಜಾಹುಸೇನ್, 12ನೇ ವಾರ್ಡ್‌ನ ವೆಂಕಟೇಶ ಮಕ್ತಲ್, 13ನೇ ವಾರ್ಡ್‌ನ ಮಲ್ಲಮ್ಮ ಶಾಂತಪ್ಪ ಹೆಂಬೆರಾಳ ಮಧ್ಯೆ ಪೈಪೋಟಿ ಇದೆ.
ಇವರ ಪೈಕಿ ವೆಂಕಟೇಶ ಮಕ್ತಲ್ ಈಗಾಗಲೇ ಎರಡು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು, ಪಕ್ಷ ನಿಷ್ಠರಾಗಿದ್ದಾರೆ. ಈ ಬಾರಿ ತಮಗೆ ಅವಕಾಶ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಹುತೇಕರು ಇವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ವರಿಷ್ಠರ ಎದುರು ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಜಾತಿ ಮತಗಳನ್ನು ಸೆಳೆಯಲು ಏನಾದರೂ ತಂತ್ರ ರೂಪಿಸಿದರೆ, ಶರಣಗೌಡ ಗೌರಂಪೇಟೆ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ಇವೆ. ಇನ್ನೊಂದೆಡೆ ದಿ| ಶಾಂತಪ್ಪ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದವರು. ಹಾಗಾಗಿ ಇವರ ಪತ್ನಿ 13ನೇ ವಾರ್ಡ್‌ನಿಂದ ಆಯ್ಕೆಯಾದ ಮಲ್ಲಮ್ಮ ಶಾಂತಪ್ಪ ತಮಗೂ ಅವಕಾಶ ನೀಡುವಂತೆ ಹೈಕಮಾಂಡ್‌ಗೆ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಸೆಳೆಯುವ ಹೈಕಮಾಂಡ್ ಮುಂದಾದರೆ 11ನೇ ವಾರ್ಡ್‌ನ ಖಾಜಾ ಹುಸೇನ್ ಹೆಸರು ಮುಂಚೂಣಿಯಲ್ಲಿ ಬಂದರೂ ಆಶ್ಚರ್ಯಪಡಬೇಕಿಲ್ಲ.
ಉಪಾಧ್ಯಕ್ಷ ಸ್ಥಾನ: ಇನ್ನು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕೈದು ಸದಸ್ಯರ ಹೆಸರು ಕೇಳಿಬರುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಈಗಾಗಲೇ ಪಕ್ಷದ ನಾಯಕರ ಮೇಲೆ ತಮ್ಮ ಆಪ್ತರಿಂದ ಒತ್ತಡ ಹೇರುತ್ತಿದ್ದಾರೆ.
ಮಾವ ಸಂಸದ ಬಿ.ವಿ. ನಾಯಕ, ಅಳಿಯ ಕೆ. ಶಿವನಗೌಡ ನಾಯಕರ ಜಂಗಿ ಕುಸ್ತಿಯಲ್ಲಿ ಪುರಸಭೆ ಗದ್ದುಗೆ ಯಾವ ಪಕ್ಷಕ್ಕೆ ಒಲಿಯವುದೆಂಬ ಕುತೂಹಲ ಜನರಲ್ಲಿ ಮೂಡಿದೆ.
ಪಕ್ಷೇತರ ಸದಸ್ಯೆಗೆ ಡಿಮ್ಯಾಂಡ್ ಪುರಸಭೆಗೆ ಆಯ್ಕೆಯಾದ ಪಕ್ಷೇತರ ಸದಸ್ಯೆ ಸಾಬಮ್ಮ ಗುಂಡಪ್ಪ ಅವರಿಗೆ ಬೇಡಿಕೆ ಹೆಚ್ಚಿದೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಬೆಂಬಲವಿಲ್ಲದೇ ಅಧಿಕಾರ ಹಿಡಿಯಲು ಮುಂದಾದರೆ ಪಕ್ಷೇತರ ಸದಸ್ಯೆ ಬೆಂಬಲ ಅನಿವಾರ್ಯ. ಇನ್ನು ಕೇವಲ 8 ಸ್ಥಾನ ಪಡೆದ ಬಿಜೆಪಿಗೆ ಜೆಡಿಎಸ್‌ನ 3 ಮತ್ತು ಒಬ್ಬ ಪಕ್ಷೇತರ ಸದಸ್ಯೆ ಬೆಂಬಲ ಬೇಕೇಬೇಕು. ಹೀಗಾಗಿ ಪಕ್ಷೇತರ ಸದಸ್ಯೆ ಯಾರತ್ತ ಚಿತ್ತ ಹರಿಸುವರು ಎಂಬ ಕುತೂಹಲ ಕೂಡ ಇದೆ
ನಾಗರಾಜ ತೇಲ್ಕರ್