Advertisement

ಖಾತೆಗಾಗಿ ಪೈಪೋಟಿ ; ಸೋಮವಾರ ಘೋಷಣೆ ಮಾಡಲಿರುವ ಸಿಎಂ ಬಿಎಸ್‌ವೈ

10:13 AM Feb 10, 2020 | Sriram |

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆಯನ್ನು ಅಂತಿಮಗೊಳಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ರಾಜಭವನಕ್ಕೆ ಪಟ್ಟಿ ರವಾನಿಸುವ ಸಾಧ್ಯತೆಯಿದ್ದು, ಹೊಸಬರಿಗೆ ಯಾವ ಖಾತೆಗಳು ಸಿಗಲಿವೆ ಎಂಬ ಕುತೂಹಲ ಮೂಡಿದೆ.

Advertisement

ಆಯ್ದ ಖಾತೆಗಳಿಗಾಗಿ ಪಟ್ಟು ಹಿಡಿದಿರುವ ಕೆಲವು ನೂತನ ಸಚಿವರು ಅದಕ್ಕಾಗಿ ಒತ್ತಡ ತಂತ್ರ ಮುಂದುವರಿಸಿದ್ದಾರೆ. ಇನ್ನೊಂದೆಡೆ ಹಾಲಿ ಸಚಿವರು ಕೂಡ ತಮ್ಮ ಬಳಿಯಿರುವ ಪ್ರಮುಖ ಖಾತೆಗಳು ಕೈತಪ್ಪದಂತೆ ನೋಡಿಕೊಳ್ಳುವ ಕಸರತ್ತು ನಡೆಸಿದ್ದಾರೆ. ಒಟ್ಟಾರೆ ಸಚಿವರಲ್ಲೇ ಪ್ರಮುಖ ಖಾತೆಗಳಿಗೆ ಪೈಪೋಟಿ ನಡೆದಿದ್ದು, ಯಾರಿಗೆಲ್ಲ ಬಯಸಿದ ಖಾತೆಗಳು ದಕ್ಕಲಿವೆ ಎಂಬುದನ್ನು ಕಾದು ನೋಡಬೇಕಿದೆ.

ರಮೇಶ್‌ ಜಾರಕಿಹೊಳಿ ಅವರು ಜಲ ಸಂಪನ್ಮೂಲ, ಎಸ್‌.ಟಿ. ಸೋಮಶೇಖರ್‌ ಅವರು ಬೆಂಗಳೂರು ಅಭಿವೃದ್ಧಿ ಖಾತೆ, ಬೈರತಿ ಬಸವರಾಜು ನಗರಾಭಿವೃದ್ಧಿ ಖಾತೆ, ಡಾ| ಕೆ. ಸುಧಾಕರ್‌ ಉನ್ನತ ಶಿಕ್ಷಣ ಖಾತೆ, ಬಿ.ಸಿ. ಪಾಟೀಲ್‌ ಗೃಹ ಖಾತೆಗಾಗಿ ಒತ್ತಡ ಹಾಕುತ್ತಿದ್ದಾರೆ ಎಂಬ ಮಾತುಗಳಿವೆ.

ಪ್ರಭಾವಿ ಖಾತೆಗಳನ್ನೆಲ್ಲ ವಲಸಿಗ ಸಚಿವರಿಗೆ ನೀಡಿದರೆ ಮೂಲ ಬಿಜೆಪಿಗರ ಕೆಂಗಣ್ಣಿಗೆ ಗುರಿ ಯಾಗಬೇಕಾಗುತ್ತದೆ ಎಂಬ ಆತಂಕದ ಹಿನ್ನೆಲೆ ಯಲ್ಲಿ ಯಡಿಯೂರಪ್ಪ ಅವರು ಲೆಕ್ಕಾಚಾರ ನಡೆಸಿ ಸಮತೋಲನ ಸಾಧಿಸಲು ಪ್ರಯತ್ನ ನಡೆಸಿದ್ದು, ಬಹುತೇಕ ಅಂತಿಮಗೊಳಿಸಿದ್ದಾರೆ.

ಖಾತೆಗಾಗಿ ಲಾಬಿ
ಶನಿವಾರ ಖಾತೆ ಹಂಚಿಕೆ ಮಾಡುವುದಾಗಿ ಯಡಿಯೂರಪ್ಪ ಅವರು ಗುರುವಾರ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಕೆಲವು ನೂತನ ಸಚಿವರು ಕೊನೆಯ ಕ್ಷಣದವರೆಗೆ ಲಾಬಿ ನಡೆಸಿದರು. ಕೆ.ಗೋಪಾಲಯ್ಯ, ನಾರಾಯಣಗೌಡ ಅವರು ಶನಿವಾರ ಬೆಳಗ್ಗೆ ಯಡಿಯೂರಪ್ಪ ಅವರನ್ನು ನಿವಾಸದಲ್ಲಿ ಭೇಟಿಯಾಗಿ ಉತ್ತಮ ಖಾತೆ ನೀಡುವಂತೆ ಮನವಿ ಮಾಡಿದರು ಎನ್ನಲಾಗಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಸ್‌.ಟಿ. ಸೋಮಶೇಖರ್‌, ನಾನು ಬೆಂಗಳೂರಿನ ಶಾಸಕ ನಾಗಿರುವುದರಿಂದ ಬೆಂಗಳೂರು ಅಭಿವೃದ್ಧಿ ಖಾತೆ ಕೇಳಿದ್ದೇನೆ. ಮುಖ್ಯಮಂತ್ರಿಗಳು ಯಾವ ಖಾತೆ ನೀಡಿದರೂ ನಿಭಾಯಿಸುತ್ತೇನೆ ಎಂದಿದ್ದಾರೆ.

ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ?
ಶುಕ್ರವಾರ ರಾತ್ರಿ ಯಡಿಯೂರಪ್ಪ ಅವರನ್ನು ನಿವಾಸದಲ್ಲಿ ಭೇಟಿಯಾಗಿದ್ದ ಸಚಿವ ರಮೇಶ್‌ ಜಾರಕಿಹೊಳಿ ಅವರು ಜಲಸಂಪನ್ಮೂಲ ಖಾತೆಗೆ ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿಗಳು ಬಹುತೇಕ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಚಿವ ಸ್ಥಾನ ಕೈತಪ್ಪಿದ ಕಾರಣಕ್ಕೆ ಬೇಸರಗೊಂಡಿದ್ದ ಮಹೇಶ್‌ ಕುಮಟಳ್ಳಿ ಅವರಿಗೂ ಪ್ರಮುಖ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು. ಮಾತುಕತೆ ವೇಳೆ ಉಪಸ್ಥಿತರಿದ್ದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೂಡ ಇದಕ್ಕೆ ದನಿಗೂಡಿಸಿದರು. ಅಂತಿಮವಾಗಿ ಸಿಎಂ ಸೂಕ್ತ ಸ್ಥಾನಮಾನ ನೀಡುವುದಾಗಿ ಮಹೇಶ್‌ ಕುಮಟಳ್ಳಿ ಅವರನ್ನು ಸಮಾಧಾನಪಡಿಸಿದರು ಎನ್ನಲಾಗಿದೆ.

ನೂತನ ಸಚಿವರಿಗೆ
ಸಂಭಾವ್ಯ ಖಾತೆ
-ರಮೇಶ್‌ ಜಾರಕಿಹೊಳಿ- ಜಲಸಂಪನ್ಮೂಲ
-ಆನಂದ್‌ ಸಿಂಗ್‌- ಗಣಿ/ ಅಲ್ಪಸಂಖ್ಯಾಕರ ಕಲ್ಯಾಣ
-ಶಿವರಾಮ ಹೆಬ್ಟಾರ್‌- ಪೌರಾಡಳಿತ
-ಎಸ್‌.ಟಿ. ಸೋಮಶೇಖರ್‌- ಸಹಕಾರ
-ಬೈರತಿ ಬಸವರಾಜು – ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ ಹೊರತುಪಡಿಸಿ)
-ಡಾ| ಕೆ. ಸುಧಾಕರ್‌- ವೈದ್ಯಕೀಯ ಶಿಕ್ಷಣ
-ಬಿ.ಸಿ.ಪಾಟೀಲ್‌- ಕೃಷಿ/ಅರಣ್ಯ
-ಕೆ.ಗೋಪಾಲಯ್ಯ-ಎಪಿಎಂಸಿ (ತೋಟಗಾರಿಕೆ ಹೊರತುಪಡಿಸಿ)/ ಕಾರ್ಮಿಕ
-ನಾರಾಯಣಗೌಡ -ಆಹಾರ ಮತ್ತು ನಾಗರಿಕ ಪೂರೈಕೆ
-ಶ್ರೀಮಂತ ಪಾಟೀಲ್‌-ಸಕ್ಕರೆ

ಬಿಎಸ್‌ವೈ ನಿವಾಸಕ್ಕೆ
ಅಶೋಕ್‌ ಭೇಟಿ 
ಸಚಿವ ಆರ್‌.ಅಶೋಕ್‌ ಅವರು ಶನಿವಾರ ಬೆಳಗ್ಗೆ ಯಡಿಯೂರಪ್ಪ ಅವರ ಡಾಲರ್ ಕಾಲನಿ ನಿವಾಸಕ್ಕೆ ತೆರಳಿ ಚರ್ಚಿಸಿದರು. ಹೆಚ್ಚುವರಿಯಾಗಿ ನೀಡಿದ್ದ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲು ಬಿಟ್ಟುಕೊಡಬೇಕು ಎಂದು ಯಡಿ ಯೂರಪ್ಪ ಸೂಚನೆ ನೀಡಿದ್ದರು ಎನ್ನಲಾಗಿದೆ. ವಿಧಾನ ಸೌಧದಲ್ಲಿ ಶನಿವಾರ ಪ್ರತಿಕ್ರಿಯಿಸಿದ ಆರ್‌.ಅಶೋಕ್‌, ಯಾರೊಬ್ಬರೂ ಇಂಥದ್ದೇ ಖಾತೆಗಾಗಿ ಬೇಡಿಕೆ ಇಟ್ಟಿಲ್ಲ. ಬೆಂಗಳೂರಿನವರೇ ಆಗಿರುವುದರಿಂದ ಮನವಿ ಮಾಡಿದ್ದಾರೆ ಅಷ್ಟೆ. ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತಾರೆ. ಖಾತೆಗಾಗಿ ಖ್ಯಾತೆ ತೆಗೆಯುವವರು ನಮ್ಮಲ್ಲಿ ಯಾರೂ ಇಲ್ಲ ಎಂದು ಹೇಳಿದರು. ಮಾಜಿ ಸಚಿವ ಅಪ್ಪಚ್ಚು ರಂಜನ್‌ ನನ್ನ ಸ್ನೇಹಿತರಾಗಿದ್ದು, ಅವರ ಹೇಳಿಕೆ ಗಮನಿಸಿದ್ದೇನೆ. ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಎಲ್ಲವೂ ತೀರ್ಮಾನವಾಗಿದೆ. ಜೂನ್‌ನಲ್ಲಿ ಸಂಪುಟ ಪುನಾರಚನೆಯಾಗುವ ಬಗ್ಗೆ ಯಾವುದೇ ಚರ್ಚೆ ಈವರೆಗೆ ನಡೆದಿಲ್ಲ. ತ್ಯಾಗ ಮಾಡುವ ಸಂದರ್ಭ ಇಲ್ಲವೇ ಇಲ್ಲ ಎಂದು ತಿಳಿಸಿದರು.

ನೂತನ ಸಚಿವರಿಗೆ ಖಾತೆಗಳ ಪಟ್ಟಿ ಸಿದ್ಧವಿದ್ದು, ಸೋಮವಾರ ಹಂಚಿಕೆ ಮಾಡಲಾಗುವುದು. ಖಾತೆ ಹಂಚಿಕೆ ಸಂಬಂಧ ದಿಲ್ಲಿಗೆ ಹೋಗುವುದಿಲ್ಲ. ಶನಿವಾರ ಸರಕಾರಿ ರಜೆ ಇರುವ ಕಾರಣ ಖಾತೆ ಹಂಚಿಕೆ ಮಾಡಿಲ್ಲ. ಸೋಮವಾರ ಖಾತೆ ಹಂಚಿಕೆ ಮಾಡಲಾಗುವುದು.
– ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next