Advertisement
ನಾವುಂದ ಗ್ರಾಮದ ಸಾಲ್ಬುಡ, ಅರೆಹೊಳೆ, ಕಂಡಿಕೇರಿ, ಬಾಂಗಿನ್‌ಮನೆ, ಕೆಳಾಬದಿ ಪರಿಸರದಲ್ಲಿ ಭಾರೀ ಮಳೆಯಿಂದಾಗಿ ಒಂದು ವಾರವಿಡೀ ನೆರೆ ಪರಿಸ್ಥಿತಿ ಉಂಟಾಗಿ, ಜನ ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿತ್ತು. ನೆರೆಗೆ ಅಲ್ಲಿನ ನಿವಾಸಿಗರು ಅಕ್ಷರಶಃ ನಲುಗಿ ಹೋಗಿದ್ದರು. ಈ ವೇಳೆ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಹೆಕ್ಟೇರ್‌ಗಟ್ಟಲೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡು, ನಾಟಿ ಮಾಡಿದ ಭತ್ತದ ಪೈರು ಕೊಳೆತು ಹೋಗಿತ್ತು.
Related Articles
Advertisement
ನಾವುಂದ ಒಂದೇ ಗ್ರಾಮದಲ್ಲಿ ಸಾಲ್ಬುಡ, ಅರೆಹೊಳೆ ಸುತ್ತಮುತ್ತಲಿನ ಪರಿಸರದಲ್ಲಿ ಸುಮಾರು 30 ಹೆಕ್ಟೇರ್ ಗದ್ದೆಯು ಮುಳುಗಡೆಯಾಗಿ, ನಾಟಿ ಮಾಡಿದ ಭತ್ತ ಕೊಳೆತು ಹೋಗಿತ್ತು. ಅದಾಗಿ ಇಲ್ಲಿನ ರೈತರು ದುಬಾರಿ ಬೆಲೆ ಅಂದರೆ 25 ಕೆಜಿ ಬಿತ್ತನೆ ಬೀಜಕ್ಕೆ 900 ರೂ. ತೆತ್ತು ಮರು ಬಿತ್ತನೆ ಮಾಡಿದ್ದು, ಆ ಬಳಿಕದ ಮಳೆಗೆ ಇದರಲ್ಲಿ ಬಹುಪಾಲು ಕೊಳೆತು ನಾಶವಾಗಿದೆ. ಒಟ್ಟಿನಲ್ಲಿ ಇದನ್ನೇ ನಂಬಿಕೊಂಡಿರುವ ಅನ್ನದಾತರಿಗೆ ಈ ಹಂಗಾಮಿನಲ್ಲಿ ಕಿಂಚಿತ್ತೂ ಕೈಗೆ ಸಿಗದಂತಾಗಿದೆ.
ಇನ್ನು ಅಧಿಕಾರಿಗಳ ಮಾಹಿತಿ ಪ್ರಕಾರ ಸುಮಾರು 90 ಎಕರೆ ಕೃಷಿ ಭೂಮಿಗೆ ಹಾನಿಯಾಗಿದ್ದು, ಈ ಭಾಗದ 100ಕ್ಕೂ ಮಿಕ್ಕಿ ಮಂದಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಈವರೆಗೆ ಒಂದು ರೂ. ಪರಿಹಾರವೂ ಯಾರಿಗೂ ಸಿಕ್ಕಿಲ್ಲ. ಇನ್ನು ಒಂದು ಜಾನುವಾರು ಸಾವನ್ನಪ್ಪಿದ್ದು, ಆ ಮನೆಯವರಿಗೂ ಯಾವುದೇ ಪರಿಹಾರ ಸಿಕ್ಕಿಲ್ಲ.
ರಸ್ತೆಗೂ ಹಾನಿ: ದುರಸ್ತಿಗೆ ಆಗ್ರಹ
ನೆರೆಯಿಂದಾಗಿ ನಾವುಂದ – ಅರೆಹೊಳೆ ಮುಖ್ಯ ರಸ್ತೆಯು ವಾರಗಟ್ಟಲೆ ಮುಳುಗಡೆಯಾಗಿದ್ದು, ಇದರಿಂದಾಗಿ ಹಲವು ಕಡೆಗಳಲ್ಲಿ ದೊಡ್ಡ – ದೊಡ್ಡ ಹೊಂಡ ಬಿದ್ದಿದೆ. ಪ್ರಾಕೃತಿಕ ವಿಕೋಪ ನಿಧಿಯಡಿ ಇದನ್ನು ದುರಸ್ತಿಪಡಿಸಬೇಕು ಮಾತ್ರವಲ್ಲದೆ ಪದೇ ಪದೆ ಮುಳುಗಡೆಯಾಗುವ ಈ ರಸ್ತೆಯನ್ನು 2-3 ಅಡಿ ಎತ್ತರಕ್ಕೇರಿಸಿದರೆ ಅನುಕೂಲವಾಗಬಹುದು ಎನ್ನುವುದು ಇಲ್ಲಿನ ಜನರ ಬೇಡಿಕೆಯಾಗಿದೆ.
ಶಾಶ್ವತ ಪರಿಹಾರಕ್ಕೆ ಸಕಾಲ
ಕಳೆದ ಹಲವಾರು ವರ್ಷಗಳಿಂದ ಈ ಸಾಲ್ಬುಡ, ಅರೆಹೊಳೆ ಪ್ರದೇಶವು ನೆರೆಗೆ ತುತ್ತಾಗುತ್ತಿದೆ. ಸೌಪರ್ಣಿಕಾ ನದಿ ತೀರದ ಸಾಲ್ಬುಡ, ಕಂಡಿಕೇರಿ, ಕೆಳಾಬದಿ, ಅರೆಹೊಳೆ, ಬಾಂಗಿನ್‌ಮನೆಯುದ್ದಕ್ಕೂ ನದಿ ದಂಡೆ ನಿರ್ಮಿಸಬೇಕಿದೆ. ಅದಲ್ಲದೆ ಅರೆಹೊಳೆಯ ರೈಲ್ವೇ ಕೆಳ ಸೇತುವೆ ಬಳಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡಿಕೊಡಬೇಕಿದೆ. ನೆರೆಗೆ ತುತ್ತಾಗುವ 30-40 ಮನೆಗಳಿಗೆ ಅಲ್ಲಿಂದ ಬೇರೆ ಕಡ ತಲಾ 2 ಸೆನ್ಸ್ ನಿವೇಶನ ನೀಡಿದರೆ ಸುರಕ್ಷತಾ ಸ್ಥಳದಲ್ಲಿ ಮನೆ ನಿರ್ಮಿಸಿಕೊಳ್ಳಬಹುದು. ನಾವುಂದ ಗ್ರಾಮದಲ್ಲೊಂದು ಶಾಶ್ವತ ಜಾನುವಾರು ಶೆಡ್ ಅಗತ್ಯವಿದೆ. ಈಗ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳಲು ಸಕಾಲವಾಗಿದೆ.
ಬೆಳೆ ಪರಿಹಾರ ಸಿಗಲಿ: ಮಳೆಯಿಂದಾಗಿ ದುಬಾರಿ ಬೆಲೆ ಕೊಟ್ಟು ಖರೀದಿಸಿದ ಮರು ಬಿತ್ತನೆ ಬೀಜವು ನಾಶವಾಗಿದೆ. ಮೊದಲ ಬಾರಿಗೆ ನಾಶವಾಗಿದ್ದರಿಂದ ಪರಿಹಾರವೂ ಸಿಕ್ಕಿಲ್ಲ. ಆದಷ್ಟು ಬೇಗ ಕೊಡುವಂತಹ ವ್ಯವಸ್ಥೆ ಮಾಡಲಿ. ಮಳೆಯಿಂದಾಗಿ ರಸ್ತೆಗೆ ಹಾನಿಯಾಗಿದ್ದು, ಅದನ್ನು ದುರಸ್ತಿ ಮಾಡಲಿ. ಇದರೊಂದಿಗೆ ಈಗಿನಿಂದಲೇ ಶಾಶ್ವತ ಪರಿಹಾರ ಕೈಗೊಳ್ಳುವ ಪ್ರಯತ್ನ ಮಾಡಲಿ. – ರಾಜೇಶ್ ಸಾಲ್ಬುಡ, ಸ್ಥಳೀಯ ಗ್ರಾ.ಪಂ. ಸದಸ್ಯ
ಪರಿಶೀಲಿಸಿ ಕ್ರಮ: ಮನೆಗಳಿಗೆ ಹಾನಿಯಾದ ಬಗ್ಗೆ ಬಹುತೇಕ ಎಲ್ಲರಿಗೂ ಪರಿಹಾರ ನೀಡಲಾಗಿದೆ. ಇನ್ನೂ ಬಾಕಿ ಇದ್ದರೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ರಸ್ತೆ ದುರಸ್ತಿ, ಕೃಷಿ ಹಾನಿ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಬಳಿ ಮಾತನಾಡಲಾಗುವುದು. – ಶ್ರೀಕಾಂತ್ ಎಸ್. ಹೆಗ್ಡೆ, ಬೈಂದೂರು ತಹಶೀಲ್ದಾರ್
-ಪ್ರಶಾಂತ್ ಪಾದೆ